ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಮೆಡಿಕವರ್ ಹಾಸ್ಪಿಟಲ್ಸ್ ಕಳೆದ ವಾರ ಪೂರ್ತಿ ಆರೋಗ್ಯ ಜಾಗೃತಿ ಮತ್ತು ಅನಾರೋಗ್ಯ ತಡೆಗಟ್ಟುವ ವಿಚಾರದಲ್ಲಿ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ವಿಶ್ವ ಮಧುಮೇಹ ದಿನದ ಅಂಗವಾಗಿ ವಾಕಥಾನ್, ಗರ್ಭಕಂಠದ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆಯಲ್ಲಿ ಜಾಗೃತಿ ಮತ್ತು ಉಚಿತ ಲಸಿಕೆ ವಿತರಣೆ ಹಾಗೂ ವರ್ಲ್ಡ್ ಪ್ರಿಮೆಚುರ್ ಡೇ ಹಿನ್ನೆಲೆಯಲ್ಲಿ ಮಕ್ಕಳಿಗೆ ಹಲವಾರು ಚಟುವಟಿಕೆಗಳನ್ನು ಆಯೋಜಿಸಿತ್ತು.
ವಾರಪೂರ್ತಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೆಡಿಕವರ್ ಆಸ್ಪತ್ರೆಯು, ಸಮುದಾಯ ಆರೋಗ್ಯದ ಬಗ್ಗೆ ತನ್ನ ಸಮರ್ಪಣೆಯನ್ನು ಎತ್ತಿ ತೋರಿಸಿದೆ. ರೋಗದ ಆರಂಭಿಕ ಪತ್ತೆ, ತಡೆಗಟ್ಟುವಿಕೆ ಮತ್ತು ಸಮಗ್ರ ಆರೈಕೆಯ ಮಹತ್ವ ಒತ್ತಿಹೇಳಲು ವಿವಿಧ ಗುಂಪುಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ವಿಶ್ವ ಮಧುಮೇಹ ದಿನದ ಅಂಗವಾಗಿ ವಾಕಥಾನ್ ಆಯೋಜಿಸುವ ಮೂಲಕ ಆ ವಾರವು ಪ್ರಾರಂಭಗೊಂಡಿತ್ತು. ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಆಸಕ್ತರ ಭಾಗವಹಿಸುವಿಕೆ ಕಂಡುಬಂತು. ಗೋಪಾಲನ್ ಕಾಲೇಜ್ ಆಫ್ ಕಾಮರ್ಸ್‌ನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಅಲ್ಲಿ ಡಾ.ಎಂ.ರವಿಕುಮಾರ್, ಡಾ.ಎಂ.ರಘುವರ್ಮ ಮತ್ತು ಡಾ.ಕಲ್ಪಜಿತ್ ಬಾನಿಕ್ ಅವರಂತಹ ತಜ್ಞರು ಮಧುಮೇಹ ತಡೆಗಟ್ಟಲು ಜೀವನಶೈಲಿ ಬದಲಾವಣೆಗಳು ಮತ್ತು ತುರ್ತು ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಡಾ.ರಾಜಾ ಸೆಲ್ವರಾಜನ್ ಮತ್ತು ಡಾ.ರಘುವರ್ಮ ಅವರ ನೇತೃತ್ವದಲ್ಲಿ ವೈದ್ಯರಿಗಾಗಿ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮ ಮತ್ತು ಆಕರ್ಷಕ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮೆಡಿಕವರ್ ಆಸ್ಪತ್ರೆಯು ಆಯೋಜಿಸಿದ್ದ ಮತ್ತೊಂದು ಮಹತ್ವದ ಉಪಕ್ರಮವಾಗಿದೆ. ಈ ಕಾರ್ಯಕ್ರಮವು ಆರೋಗ್ಯ ರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸಿತು. ಮುಖ್ಯ ಅತಿಥಿ ವೈಟ್ ಫೀಲ್ಡ್ ಉಪವಿಭಾಗದ ಎಸಿಪಿ ಶ್ರೀಮತಿ ರೀನಾ ಸುವರ್ಣ ಅವರು ಆಸ್ಪತ್ರೆಯ ನೂತನ ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸಾಲಯ ಉದ್ಘಾಟಿಸಿದರು. ಬಳಿಕ ಮಾತನಾಡಿ ಮಹಿಳೆಯರು ಜಾಗೃತಿಯ ಹೊಂದಬೇಕು ಎಂದರು. ಮಹಿಳಾ ಪೊಲೀಸ್ ಸಿಬ್ಬಂದಿಗೆ ಉಚಿತ ಎಚ್ ಪಿವಿ ವ್ಯಾಕ್ಸಿನೇಷನ್ ಅಭಿಯಾನ ನಡೆಸಲಾಯಿತು. ಡಾ.ಜಕ್ಕಾ ಸಾಯಿ ಮಾನಸ ರೆಡ್ಡಿ ಅವರು ಆರಂಭಿಕ ತಪಾಸಣೆ ಮತ್ತು ಚಿಕಿತ್ಸೆಯ ಪ್ರಗತಿಯ ಬಗ್ಗೆ ಮಾತನಾಡಿದರು.
ʼವರ್ಲ್ಡ್ ಪ್ರೀಮೆಚ್ಯೂರಿಟಿ ಡೇ ʼ ಆಚರಣೆಯೊಂದಿಗೆ ವಾರವು ಕೊನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಚಿತ್ರಕಲೆ, ಬಲೂನ್ ಮೋಲ್ಡಿಂಗ್ ಮತ್ತು ವ್ಯಂಗ್ಯಚಿತ್ರ ಚಿತ್ರಕಲೆಯಂತಹ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಹಿರಿಯ ತಜ್ಞರು ಮತ್ತು ನವಜಾತ ಶಿಶುವಿಜ್ಞಾನಿಗಳಾದ ಡಾ.ಆನಂದ್ ಪಾಟೀಲ್ ಮತ್ತು ಡಾ.ಸುಮಿತ್ರಾ ಅವರು ನವಜಾತ ಶಿಶುಗಳ ಆರೈಕೆಯ ಕುರಿತು ಮಾತನಾಡಿದರು. ಅದೇ ರೀತಿ ಅವಧಿಪೂರ್ವ ಹುಟ್ಟಿದ ಮಕ್ಕಳ ಆರೋಗ್ಯ ತಪಾಸಣೆಯನ್ನು ಉತ್ತೇಜಿಸಿದರು.