ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪಿ.ಎಂ. ಪೋಷಣ್ (ಮಧ್ಯಾಹ್ನದ ಉಪಾಹಾರ/ಬಿಸಿಯೂಟ) ಯೋಜನೆಯಡಿ ಕೆಲಸ ಮಾಡುತ್ತಿರುವ ತಾತ್ಕಾಲಿಕ ಅಡುಗೆ ಸಿಬ್ಬಂದಿಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಅಂತ್ಯಕ್ಕೆ (ಮಾರ್ಚ್ 31, 2026) ಇವರ ಸೇವೆಯನ್ನು ಬಿಡುಗಡೆಗೊಳಿಸಲು ಸೂಚಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ನೇಮಿಸಿಕೊಳ್ಳಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಮಾರ್ಚ್ 31ಕ್ಕೆ ಬಿಡುಗಡೆ, ಜೂನ್ 1 ರಿಂದ ಮರು ಸೇರ್ಪಡೆ:
2025-26ನೇ ಸಾಲಿನಲ್ಲಿ ಜೂನ್ 2025 ರಿಂದ ಮಾರ್ಚ್ 2026ರ ವರೆಗೆ ಒಟ್ಟು 10 ತಿಂಗಳ ಅವಧಿಗೆ ಅಡುಗೆ ಸಿಬ್ಬಂದಿಯ ಸೇವೆಯನ್ನು ಪಡೆಯಲಾಗಿತ್ತು. ಇದೀಗ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31, 2026 ರಂದು ಎಲ್ಲಾ ಅಡುಗೆ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತದನಂತರ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭದ ದಿನವಾದ ಜೂನ್ 1, 2026 ರಂದು ಇದೇ ಸಿಬ್ಬಂದಿಯನ್ನು ಮುಂದಿನ 10 ತಿಂಗಳ ಅವಧಿಗೆ ಮತ್ತೆ ತಾತ್ಕಾಲಿಕವಾಗಿ ಸೇವೆಗೆ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
60 ವರ್ಷ ಮೀರಿದವರಿಗೆ ಅವಕಾಶವಿಲ್ಲ:
ಈ ಮರು ನೇಮಕಾತಿ ಪ್ರಕ್ರಿಯೆಯಲ್ಲಿ ಇಲಾಖೆ ಪ್ರಮುಖ ನಿಯಮವೊಂದನ್ನು ಸ್ಪಷ್ಟಪಡಿಸಿದೆ. ಜೂನ್ ತಿಂಗಳಲ್ಲಿ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳುವಾಗ, 60 ವರ್ಷ ವಯೋಮಿತಿ ಮೀರಿದ ಅಡುಗೆ ಸಿಬ್ಬಂದಿಯನ್ನು ಮುಂದುವರೆಸುವಂತಿಲ್ಲ. ಅಂತಹ ಪ್ರಕರಣಗಳಿದ್ದಲ್ಲಿ, ಅವರ ಬದಲಿಗೆ ಇಲಾಖೆಯ ಚಾಲ್ತಿಯಲ್ಲಿರುವ ಮಾರ್ಗಸೂಚಿಯಂತೆ ಹೊಸ ಅಡುಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳಿಗೆ ಆಯುಕ್ತರ ಸೂಚನೆ:
ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ ಮತ್ತು ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮವು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯಲು ಶಾಲಾ ಮುಖ್ಯ ಶಿಕ್ಷಕರು, ಎಸ್ಡಿಎಂಸಿ (SDMC), ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಚ್ಚರವಹಿಸಿ, ಯೋಜನೆಯ ಯಶಸ್ಸಿಗೆ ಶ್ರಮಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿ ಸಿಇಒಗಳು, ಶಿಕ್ಷಣಾಧಿಕಾರಿಗಳು ಈ ಬಗ್ಗೆ ಸೂಕ್ತ ಮೇಲ್ವಿಚಾರಣೆ ನಡೆಸುವಂತೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.









