ಬೆಂಗಳೂರು: ನಗರದ ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ತ್ವರಿತ ವಿಲೇವಾರಿಗಾಗಿ ಪಾಸ್ ಪೋರ್ಟ್ ಕೇಂದ್ರಗಳ ಮಾದರಿಯಲ್ಲಿ “ಸೇವಾ ಕೇಂದ್ರಗಳ” ಪ್ರಾರಂಭಿಸಲಾಗುವುದೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಕುರಿತು ಜಿಬಿಎ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇ-ಖಾತಾ ಪಡೆಯುವಲ್ಲಿ ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಜಿಬಿಎ ಹೊಸದಾಗಿ ಪಾಸ್ ಪೋರ್ಟ್ ಮಾದರಿಯಲ್ಲಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದೆಂದು ಹೇಳಿದರು.
ಕಣ್ಗಾವಲು ತಂಡ ನಿಯೋಜನೆ:
ಇ-ಖಾತಾ ವಿಚಾರದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ಮೇಲೆ ನಿಗಾವಗಿಸಲು 25 ಜನ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ಒಳಗೊಂಡ ಕಣ್ಗಾವಲು ತಂಡವನ್ನು ನಿಯೋಜನೆ ಮಾಡಲಾಗಿದೆ. ಅದರ ಮೂಲಕ ಕಾರಣಗಳಿಲ್ಲದೆ ತಿರಸ್ಕರಿಸಿದವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಾಗುವುದೆಂದು ತಿಳಿಸಿದರು.
8 ಲಕ್ಷ ಇ-ಖಾತಾ ವಿತರಣೆ:
ಜಿಬಿಎ ವ್ಯಾಪ್ತಿಯಲ್ಲಿ ಈಗಾಗಲೇ 8 ಲಕ್ಷ ಇ-ಖಾತಾ ಪಡೆದಿದ್ದಾರೆ. ಬೆಂಗಳೂರು ಒನ್ ಹಾಗೂ ಸುಮಾರು 1,000 ಸ್ವಯಂ ಸೇವಕರ ಮೂಲಕವೂ ಇ-ಖಾತಾ ಪಡೆಯಬಹುದಾಗಿದೆ. ನಾಗರಿಕರಿಗೆ ಪಾರದರ್ಶಕತೆ ಹಾಗೂ ಸುಗಮವಾಗಿ ಇ-ಖಾತಾ ನೀಡುವ ಸಲುವಾಗಿ ರೌಂಡ್ ರಾಬಿನ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಅದರಿಂದ ಕೆಲ ಸಮಸ್ಯೆಗಳಾಗಿತ್ತು. ಇದೀಗ ಆ ವ್ಯವಸ್ಥೆಯನ್ನು ತೆಗೆದುಹಾಗಿ ಬೇರೆ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
22,539 ಗುಂಡಿಗಳನ್ನು ಮುಚ್ಚಲಾಗಿದೆ:
ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ನಗರದಾದ್ಯಂತ ರಸ್ತೆ ಗುಂಡಿಗಳನ್ನು ಯುದ್ಧೋಪಾದಿಯಲ್ಲಿ ಮುಚ್ಚಲಾಗುತ್ತಿದ್ದು, ಈವರೆಗೆ 22,539 ಗುಂಡಿಗಳನ್ನು ಮುಚ್ಚಲಾಗಿದೆ. ಮಳೆ ನಿರಂತರವಾಗಿ ಬಂದ ಪರಿಣಾಮ ತಡವಾಗಿದ್ದು, ಮುಂದಿನ ವರ್ಷ ರಸ್ತೆಗುಂಡಿಗಳನ್ನು ನಿಯಂತ್ರಿಸುವ ಸಲುವಾಗಿ ಧೀರ್ಘಕಾಲಿಕ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲಿ 1,682 ಕಿ.ಮೀ ಆರ್ಟಿರಿಯಲ್ ಸಬ್ ಆರ್ಟಿಯಲ್ ರಸ್ತೆಗಳಿದ್ದು, ಸುಮಾರು 8 ವರ್ಷಗಳಿಂದ ಯಾವುದೇ ಅನುದಾನ ವ್ಯಯಿಸಿಲ್ಲ. ಈ ರಸ್ತೆಗಳನ್ನು ಅಭವೃದ್ಧಿಪಡಿಸಿದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಕಡಿಮೆಯಾಗಿ ಸಂಚಾರ ದಟ್ಟಣೆ ಕ್ರಮೇಣ ನಿಯಂತ್ರಣವಾಗಲಿದೆ ಎಂದು ಹೇಳಿದರು.
4,800 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ:
1,682 ಕಿ.ಮೀ ಪ್ರಮುಖ ರಸ್ತೆಗಳ ಪೈಕಿ ಈಗಾಗಲೇ 124 ಕಿ.ಮೀ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗಿದೆ. ಇದೀಗ ಬ್ರಾಂಡ್ ಬೆಂಗಳೂರು ಅನುದಾನವಾದ 900 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ ಅನುದಾನವಾದ 800 ಕೋಟಿ ರೂ. ಸೇರಿ 1,700 ಕೋಟಿ ರೂ. ವೆಚ್ಚದಲ್ಲಿ 157 ಕಿ.ಮೀ ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ನಡೆಸಲಾಗುತ್ತಿದೆ. 273 ಕೋಟಿ ರೂ. ವೆಚ್ಚದಲ್ಲಿ 79 ಕಿ.ಮೀ ಉದ್ದ ರಸ್ತೆಯನ್ನು ಹೈಡೆನ್ಸಿಟಿ ಕಾರಿಡಾರ್, 694 ಕೋಟಿ ರೂ. ವೆಚ್ಚದಲ್ಲಿ 392 ಕಿ.ಮೀ ಉದ್ದದ ರಸ್ತೆಯನ್ನು ಬ್ಲಾಕ್ ಟಾಪಿಂಗ್ ಮಾಡಲಾಗುತ್ತಿದೆ. ಈ ಮೇಲಿನಂತೆ ಒಟ್ಟು 628 ಕಿ.ಮೀ ಉದ್ದದ ರಸ್ತೆಗಳಲ್ಲಿ ಎಲ್ಲಾ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. 401 ಕಿ.ಮೀ ಉದ್ದದ ರಸ್ತೆಗಳು ಡಿ.ಎಲ್.ಪಿ ಅವಧಿಯಲ್ಲಿದ್ದು, ಗುತ್ತಿಗೆದಾರರು ನಿರ್ವಹಣೆ ಮಾಡಲಿದ್ದಾರೆ. ಬಾಕಿಯಿರುವ ಸುಮಾರು 500 ಕಿ.ಮೀ ರಸ್ತೆ ಅಭಿವೃದ್ಧಿಗಾಗಿ ಕ್ರಿಯಾಯೋಜನೆಯನ್ನು ಸಿದ್ದಪಡಿಸಲಾಗುತ್ತಿದ್ದು, ನಗರದಲ್ಲಿರುವ ಎಲ್ಲಾ ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸಿದರೆ ಶೇ. 80 ರಷ್ಟು ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
694 ಕೋಟಿ ರೂ. ವೆಚ್ಚದ ಬ್ಲಾಕ್ ಟಾಪಿಂಗ್ ಕಾಮಗಾರಿಯ ಪೈಕಿ 10-12 ಕಿ.ಮೀ ಹೊರತುಪಡಿಸಿ ಜನವರಿ 15 ರೊಳಗಾಗಿ ಪೂರ್ಣಗೊಳಿಸಲಾಗುವುದು. ಹೊಸದಾಗಿ ರಾಜ್ಯ ಸರ್ಕಾರ ಅನುದಾನದಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಅದನ್ನು ಮಾರ್ಚ್ ಅಂತ್ಯದೊಳಗಾಗಿ ಪೂರ್ಣಗೊಳಿಲಸಾಗುವುದು. ಅಲ್ಲದೆ ಪ್ರಗತಿಯಲ್ಲಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗಾಗಿ ಪೂರ್ಣಗೊಳಿಸಲಾಗುವುದು. ಟೆಂಡರ್ ಹಂತದಲ್ಲಿರುವ ಕಾಮಗಾರಿಗಳನ್ನು ಜೂನ್- 2026 ಅಂತ್ಯದೊಳಗಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಕಟ್ & ಕವರ್ ಮಾದರಿಯಲ್ಲಿ ಕೆಳಸೇತುವೆ ನಿರ್ಮಾಣ:
ಹೆಬ್ಬಾಳ ಜಂಕ್ಷನ್ ನಲ್ಲಿರುವ ಮೇಲ್ಸೇತುವೆಯ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಹೆಬ್ಬಾಳ ಜಂಕ್ಷನ್ ನಿಂದ ಪಶು ವೈದ್ಯ ವಿಶ್ವವಿದ್ಯಾನಿಲಯದ ಆವರಣದ ಮೂಲಕ ಮೇಖ್ರಿ ವೃತ್ತದವರೆ ಭೂಗತ Cut and Cover ಮಾದರಿಯಲ್ಲಿ ಮೂರು ಪಥದ ಅವಳಿ ಕೆಳ ಮಾರ್ಗ (Underpass) ಅನ್ನು ಬಿ.ಡಿ.ಎ ವತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿದೆ.
ಕರ್ನಾಟಕ ಸರ್ಕಾರವು ಈಗಾಗಲೇ ಮೂರು ಪಥದ ಅವಳಿ ಕೆಳ ಮಾರ್ಗ (Underpass) ದೊಂದಿಗೆ ಕೆಳ ಸೇತುವೆಯನ್ನು ನಿರ್ಮಿಸಲು 2,215 ಕೋಟಿ ರೂ.ಗಳಿಗೆ ಅನುಮೋದನೆ ನೀಡಿರುತ್ತದೆ. ಸದರಿ ಕಾಮಗಾರಿಯನ್ನು ಜನವರಿ-2026 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೆಂಡರ್ ಕರೆಯಲಾಗುವುದು. ಇದಕ್ಕೆ ಯಾವುದೇ ಟೋಲ್ ಇಲ್ಲದೆ ಉಚಿತವಾಗಿ ಪ್ರವೇಶಿಸಬಹುದಾಗಿದೆ.
ಸುರಂಗ ಮಾರ್ಗಗಳ ನಿರ್ಮಾಣ:
ನಗರದಲ್ಲಿ ರೂ.45,000/- ಕೋಟಿಗಳ ಮೊತ್ತದಲ್ಲಿ ಉತ್ತದ-ದಕ್ಷಿಣ ಮಾರ್ಗದಲ್ಲಿ 16.74 ಕಿ.ಮೀ, ಪೂರ್ವ-ಪಶ್ಚಿಮ ಮಾರ್ಗದಲ್ಲಿ 20 ಕಿ.ಮೀ ಉದ್ದದ ಸುರಂಗ ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು. ರಾಜ್ಯ ಸರ್ಕಾರದ ಅನುದಾನದ ಜೊತೆಗೆ ಹುಡ್ಕೋದಿಂದ ಲೋನ್ ಪಡೆಯುವ ಮೂಲಕ ಸುರಂಗ ಮಾರ್ಗಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗುತ್ತಿದ್ದು, ಶೀಘ್ರದಲ್ಲೇ ಸದನದಲ್ಲಿ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು.
ಎತ್ತರಿಸಿದ ಕಾರಿಡಾರ್‌ಗಳು/ಗ್ರೇಡ್ ಸೆಪರೇಟರ್‌ಗಳ ನಿರ್ಮಾಣ:
ನಗರದಲ್ಲಿ 18,204 ಕೋಟಿ ರೂ.ಗಳ (ಭೂಸ್ವಾಧೀನ ವೆಚ್ಚ ಹೊರತುಪಡಿಸಿ) ಮೊತ್ತದಲ್ಲಿ 126.44 ಕಿ.ಮೀ ಉದ್ದದ 13 ಎತ್ತರಿಸಿದ ಕಾರಿಡಾರ್ ಗಳನ್ನು ಅನುಷ್ಠಾನಗೊಳಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದ್ದು, ಸದನದಿಂದ ಅನುಮತಿ ಪಡೆಯಬೇಕಿದೆ ಎಂದು ತಿಳಿಸಿದರು.
ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣ:
ನಗರದಲ್ಲಿ ರಸ್ತೆ ಅಗಲೀಕರಣದ ವೇಳೆ ಸ್ವತ್ತುಗಳಿಗೆ ಟಿ.ಡಿ.ಆರ್ ನೀಡಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲು ಹೆಚ್ಚು ಹಣದ ಅವಶ್ಯಕತೆಯಿದೆ. ಈ ಕಾರಣದಿಂದಾಗಿ ಡಬ್ಬಲ್ ಡೆಕ್ಕರ್ ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ರಾಗಿಗುಡ್ಡದಲ್ಲಿ ಡಬ್ಬಲ್ ಡೆಕ್ಕರ್ ನಿರ್ಮಾಣ ಕೂಡಾ ಮಾಡಲಾಗಿದೆ. ಅದರಂತೆಯೇ, ಜಿಬಿಎ ವ್ಯಾಪ್ತಿಯಲ್ಲಿ 9,000 ಕೋಟಿ ರೂ.ಗಳ ಮೊತ್ತದಲ್ಲಿ 40 ಕಿ.ಮೀ ಉದ್ದದ ಮೆಟ್ರೋ ಸಂಯೋಜಿತ ಡಬ್ಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲು ಉದ್ಧೇಶಿಸಲಾಗಿದೆ. ಈ ಸಂಬಂಧ ಮೆಟ್ರೋ ವತಿಯಿಂದ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ. ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
33 ಪ್ಯಾಕೇಜ್ ನಲ್ಲಿ ಟೆಂಡರ್ ಆಹ್ವಾನ:
ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಇದೀಗ ಇತ್ಯರ್ಥವಾಗಿದೆ. ಹೊಸದಾಗಿ 33 ಪ್ಯಾಕೇಜ್ ಗಳಲ್ಲಿ ಟೆಂಡರ್ ಕರೆಯಲಾಗಿದೆ. ಅದರ ಪೈಕಿ 132 ಬಿಡ್ಸ್ ಬಂದಿದ್ದು, 4-5 ಬಿಡ್ ಬಂದಿಲ್ಲ. ತಾಂತ್ರಿಕ ಇವ್ಯಾಲ್ಯುವೇಷನ್ ಕಾರ್ಯ ಒಂದು ವಾರದಲ್ಲಿ ಪೂರ್ಣಗೊಳಿಸಿ ಡಿಸೆಂಬರ್-2025 ಅಂತ್ಯದಲ್ಲಿ ಕಾರ್ಯಾದೇಶ ನೀಡಲಾಗುವುದು.
ಯಾಂತ್ರಿಕ ಕಸ ಗುಡಿಸುವ ಯಂತ್ರಗಳಿಗೆ ಸಲಹೆಗಳನ್ನು ನೀಡಿ:
ನಗರದಲ್ಲಿ ಯಾಂತ್ರಿಕೃತ ಕಸ ಗುಡಿಸುವ ಯಂತ್ರಗಳ ವಿಚಾರವಾಗಿ ಖರೀದಿಸಬೇಕೇ ಅಥವಾ ಬಾಡಿಗೆ ಆಧಾರದಲ್ಲಿ ಪಡೆಯಬೇಕೆ ಎಂಬುದರ ಕುರಿತು 2 ವರ್ಷಗಳಿಂದ ಎಲ್ಲಾ ಕಡೆಯಿಂದಲೂ ಕೂಲಂಕುಷವಾಗಿ ಅಧ್ಯಯನ ನಡೆಸಲಾಗಿದ್ದು, ಇದೀಗ ಬಾಡಿಗೆ ಆಧಾರದಲ್ಲಿ ನಿರ್ವಹಿಸಲು ಮುಂದಾಗಲಾಗಿದೆ. ಅದರಂತೆ ಸ್ವಯಂಚಾಲಿತ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ಖರೀದಿ ಮಾಡುವ ದರಗಳ ವಿವರಗಳನ್ನು ಈಗಾಗಕೇ ಜಿ.ಬಿ.ಎ ವೆಬ್ಸೈಟ್ ನಲ್ಲಿ https://bbmp.gov.in/updates/index.html ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ಏನಾದರೂ ಬದಲಾವಣೆಗಳು/ತಪ್ಪಿದ್ದರೆ ಟೆಂಡರ್ ಮಾಡುವುದಕ್ಕೂ ಮುಂಚಿತವಾಗಿ ನಾಗರಿಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು gbasuggestion@gmail.com ಇ-ಮೇಲ್ ಮೂಲಕ ಸಲಹೆಗಳನ್ನು ನೀಡಬಹುದಾಗಿದೆ.
ಪ್ರೀಮಿಯಂ ಎಫ್.ಐ.ಆರ್ ನಿಂದ 2,000 ಕೋಟಿ ರೂ. ಆದಾಯ ನಿರೀಕ್ಷೆ:
ನಗರದಲ್ಲಿ ಪ್ರೀಮಿಯಂ ಎಫ್.ಎ.ಆರ್ ಕುರಿತು ಘನ ಉಚ್ಚನ್ಯಾಯಾಲಯವು ದಿನಾಂಕ: 05-12-2025 ರಂದು ಸದರಿ ದಾವೆಯನ್ನು ವಜಾಗೊಳಿಸಿ ಜಿಬಿಎ ಪರವಾಗಿ ತೀರ್ಪು ನೀಡಿರುತ್ತಾರೆ. ಅದರಿಂದಾಗಿ ಇನ್ನು ಮುಂದೆ ಸಾರ್ವಜನಿಕರು, ಭೂ ಮಾಲೀಕರು, ಅಭಿವೃದ್ದಿದಾರರು ಮತ್ತು ನಿರ್ಮಾಣದಾರರು ಪ್ರಿಮಿಯಂ ಎಫ್.ಎ.ಅರ್ ಅನ್ನು ಸದುಪಯೋಗ ಪಡಿಸಿಕೊಳ್ಳಬಹು. ಇದರಿಂದಾಗಿ ಜಿಬಿಎ ಗೆ ಪ್ರತಿ ವರ್ಷ 2,000 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.
ಇತರೆ ಪ್ರಮುಖ ಅಂಶಗಳು:
• ಜಿಬಿಎ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳನ್ನು ಇನ್ನು ಮುಂದೆ ಕಾಬುಲ್ ಸ್ಟೋನ್/ಟೈಲ್ಸ್ ಅಳವಡಿಸದೆ ಬ್ರಷ್ ಕಾಂಕ್ರಿಟ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು.
• ಎಂ.ಜಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಬದಲಾಗಿ ಸ್ಟೋನ್ ಮ್ಯಾಟ್ರಿಕ್ ಹಾಸ್ಪಾಲ್ಟ್ ಡಾಂಬರು ಮಾದರಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು.
• NDMF ಕ್ರಿಯಾ ಯೋಜನೆಯಡಿಯಲ್ಲಿ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವ (22 ಕಲ್ವರ್ಟ್ ಮತ್ತು ಬ್ರಿಡ್ಜ್ ಗಳು) 13 ಪ್ಯಾಕೇಜುಗಳ ಕಾಮಗಾರಿಗಳಲ್ಲಿ ಈಗಾಗಲೇ 8 ಪ್ಯಾಕೇಜುಗಳಿಗೆ Letter of Acceptance ಜಾರಿ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಕಾರ್ಯಾದೇಶಗಳನ್ನು ನೀಡಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.
• ವಿಶ್ವ ಬ್ಯಾಂಕ್ ನೆರವಿನ ಜಲಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮದ ಕ್ರಿಯಾಯೋಜನೆಯ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವ (173 ಕಿ.ಮೀ ಹೊಸ ಮಳೆ ನೀರುಗಾಲುವೆ ಮತ್ತು 80 ಕಿ.ಮೀ ಹಳೆ ಎಸ್.ಎಸ್.ಎಂ ಗೋಡೆಯನ್ನು ಆರ್.ಸಿ.ಸಿ ಗೋಡೆಯಾಗಿ ಮೇಲ್ದರ್ಜೆಗೇರಿಸುವುದು) ಕಾರ್ಯ ಪ್ರಗತಿಯಲ್ಲಿದೆ.
ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಮಾತನಾಡಿ, ನಗರದಲ್ಲಿ ತಿಂಗಳ ಒಳಗಾಗಿ ರಸ್ತೆ ಗುಂಡಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನಾಗರಿಕರಿಗೆ ಸುಗಮ ಸಂಚಾರ ಒದಗಿಸುವ ಉದ್ದೇಶದಿಂದ ಶಾಶ್ವತ ಪರಿಹಾರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಚಾರ ದಟ್ಟಣೆ ಸಮಸ್ಯೆಗಳನ್ನು ಪರಿಗಣಿಸಿ, ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚದೇ, ಸಂಚಾರಿ ಪೊಲೀಸ್ ಇಲಾಖೆಯ ಅನುಮತಿ ಪಡೆದು ಕೆಲಸಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆಯಂತಹ ಹೈ-ಡೆನ್ಸಿಟಿ ಮಾರ್ಗಗಳಲ್ಲಿ ಉತ್ತಮ ಗುಣಮಟ್ಟದ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಆರ್. ಟಿ. ನಗರ ರಸ್ತೆ, ಎಂ.ಎಂ ರಸ್ತೆ, ಟ್ಯಾನರಿ ರೋಡ್–ಪ್ರೇಸಿಡೆನ್ಸಿ ಪೋಲಿಸ್ ಠಾಣೆ ಭಾಗ, ನೆಹರು ರಸ್ತೆ, ಸುಭ್ರಂ ಚೆಟ್ಟಿ ರಸ್ತೆ ಮತ್ತು ನೆಟ್ಟಕಲ್ಲಪ್ಪ ವೃತ್ತ–ನಾಲ್ಕನೇ ಕ್ರಾಸ್, ಜೆ.ಸಿ ರಸ್ತೆಯಲ್ಲಿ ಈಗಾಗಲೇ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.
ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ಮಾತನಾಡಿ, ನಗರದಲ್ಲಿ ವಲಯಕ್ಕೆ 1 ರಂತೆ 10 ಸೇವಾ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. 3 ತಿಂಗಳಲ್ಲಿ ಏಜೆನ್ಸಿಯನ್ನು ಅಂತಿಮಗೊಳಿಸಿ ಯೋಜನೆ ಪ್ರಾರಂಭಿಸಲಾಗುವುದೆಂದು ತಿಳಿಸಿದರು.
ಮಧ್ಯವರ್ತಿಗಳ ಮೂಲಕ ಇ-ಖಾತಾ ಮಾಡಿಸಿಕೊಳ್ಳುವುದಕ್ಕೆ ನಾಗರಿಕರು ಮುಂದಾಗಬಾರದು. ಎಲ್ಲಾ ನಾಗರಿಕರು ತಾಳ್ಮೆಯಿಂದಿದ್ದು, ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ಸ್ವಲ್ಪ ಅವಧಿ ಕಾದರೆ, ಕಾಲಮಿತಿಯೊಳಗಾಗಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ತಾಂತ್ರಿಕ ಸಮಸ್ಯೆಗಳಿದ್ದರೆ ಮಾತ್ರ ತಡವಾಗುತ್ತಿದ್ದು, ಕಾರಣವಿಲ್ಲದೆ ತಿರಸ್ಕರಿಸುವ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಗುವುದೆಂದು ಹೇಳಿದರು.
ಬಿ-ಖಾತಾದಿಂದ ಎ-ಖಾತಾ ಪರಿವರ್ತನೆ ಮಾಡುವ ಸಲುವಾಗಿ ಸುಮಾರು 3,000 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಆ ಪೈಕಿ ಶೇ. 98 ಮಂದಿ ನಕ್ಷೆಯನ್ನೇ ಅಪ್ಲೋಡ್ ಮಾಡಿರುವುದಿಲ್ಲ. ಈ ಸಂಬಂಧ ಅರ್ಜಿಗಳನ್ನು ಪರಿಶೀಲಿಸಿ ಕೂಡಲೆ ವಿಲೇವಾರಿ ಮಾಡಲು ಕ್ರಮವಹಿಸಲಾಗುವುದೆಂದು ತಿಳಿಸಿದರು.
ಈ ವೇಳೆ ಬಿಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಡಾ: ಬಿ.ಎಸ್ ಪ್ರಹ್ಲಾದ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.








