ನವದೆಹಲಿ: ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯನ್ನು ನೇಮಕ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರಂಪ್ ತಮ್ಮ ವಿಶ್ವಾಸಾರ್ಹ ಸೆರ್ಗಿಯೋ ಗೋರ್ ಅವರನ್ನು ಭಾರತಕ್ಕೆ ರಾಯಭಾರಿಯಾಗಿ ನೇಮಿಸಿದ್ದಾರೆ. ಸೆರ್ಗಿಯೋ ಅವರು ದಕ್ಷಿಣ ಮತ್ತು ಮಧ್ಯ ಏಷ್ಯಾಕ್ಕೆ ಅಮೆರಿಕದ ವಿಶೇಷ ರಾಯಭಾರಿಯಾಗಲಿದ್ದಾರೆ.
ಅಧ್ಯಕ್ಷ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ರೂತ್ ಸೋಷಿಯಲ್ನಲ್ಲಿ ಪೋಸ್ಟ್ನಲ್ಲಿ ಈ ಘೋಷಣೆ ಮಾಡಿದ್ದಾರೆ.
ಸೆರ್ಗಿಯೋ ಗೋರ್ ಪ್ರಸ್ತುತ ಶ್ವೇತಭವನದ ಅಧ್ಯಕ್ಷೀಯ ಸಿಬ್ಬಂದಿ ಕಚೇರಿಯ ನಿರ್ದೇಶಕರಾಗಿದ್ದಾರೆ. ಯುಎಸ್ ಸೆನೆಟ್ನಿಂದ ದೃಢೀಕರಣದ ನಂತರ ಅವರು ಭಾರತಕ್ಕೆ ಹೊಸ ಶಾಶ್ವತ ಯುಎಸ್ ರಾಯಭಾರಿಯಾಗಲಿದ್ದಾರೆ.
ಭಾರತಕ್ಕೆ ಖಾಯಂ ರಾಯಭಾರಿ ನೇಮಕ
ಎರಿಕ್ ಗಾರ್ಸೆಟ್ಟಿ ಅಧಿಕಾರದಿಂದ ಕೆಳಗಿಳಿದ ಏಳು ತಿಂಗಳ ನಂತರ, ಯುಎಸ್ ಭಾರತಕ್ಕೆ ತನ್ನ ಖಾಯಂ ರಾಯಭಾರಿಯನ್ನು ನೇಮಿಸಿತು. ಸೆರ್ಗಿಯೋ ಅವರು ಭಾರತಕ್ಕೆ ಅಮೆರಿಕದ 26ನೇ ರಾಯಭಾರಿಯಾಗಲಿದ್ದಾರೆ. “ಸೆರ್ಗಿಯೋ ಗೋರ್ ಅವರನ್ನು ಭಾರತಕ್ಕೆ ಮುಂದಿನ ಯುಎಸ್ ರಾಯಭಾರಿಯಾಗಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ನಾಮನಿರ್ದೇಶನ ಮಾಡುತ್ತೇನೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ” ಎಂದು ಅವರು ತಮ್ಮ ಟ್ರೂತ್ ಸೋಷಿಯಲ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ