ಅಮರಾವತಿ: ಆಂಧ್ರಪ್ರದೇಶದ ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆ ಮತ್ತು ಸರ್ಕಾರದ ಆಕರ್ಷಕ ಪುನರ್ವಸತಿ ನೀತಿಗೆ ಮಣಿದು, ಹಿರಿಯ ಮಾವೋವಾದಿ ನಾಯಕ ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಕ್ರಿಯ ಕಾರ್ಯಕರ್ತರು ಪೊಲೀಸರ ಮುಂದೆ ಶರಣಾಗಿದ್ದಾರೆ. ಇದು ರಾಜ್ಯದಲ್ಲಿ ಮಾವೋವಾದಿ ಸಂಘಟನೆಗೆ ದೊಡ್ಡ ಹೊಡೆತ ನೀಡಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಶರಣಾದವರಲ್ಲಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮತ್ತು ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿರಿಯ ಕೆಡರ್ ನಾಯಕನೂ ಸೇರಿದ್ದಾನೆ. ಈತನ ಮೇಲೆ ಲಕ್ಷಾಂತರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
“ಸಂಘಟನೆಯ ಸಿದ್ಧಾಂತದ ಮೇಲಿನ ಭ್ರಮನಿರಸನ, ಅನಾರೋಗ್ಯದ ಸಮಸ್ಯೆಗಳು ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತರಾಗಿ ಮುಖ್ಯವಾಹಿನಿಗೆ ಮರಳಲು ನಿರ್ಧರಿಸಿದ್ದೇವೆ” ಎಂದು ಶರಣಾದವರು ತಿಳಿಸಿದ್ದಾರೆ.ಶರಣಾಗತಿಯ ಸಂದರ್ಭದಲ್ಲಿ ಮಾವೋವಾದಿಗಳು ತಮಗಿದ್ದ ಶಸ್ತ್ರಾಸ್ತ್ರಗಳು ಮತ್ತು ಕೆಲವು ಪ್ರಮುಖ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.








