ಚಿಕ್ಕಮಗಳೂರು: ನಗರದಲ್ಲಿನ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜು ವತಿಯಿಂದ ಜ.9ರ ಗುರುವಾರ ಕನ್ನಡ ಸ್ನಾತಕೋತ್ತರ ಮತ್ತು ಸ್ನಾತಕ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ‘ವಿಶ್ವಮಾನವ ದಿನ ಆಚರಣೆ’ ಮತ್ತು ‘ಕುವೆಂಪು ಬದುಕು ಬರಹ ಕುರಿತ ವಿದ್ಯಾರ್ಥಿ ವಿಚಾರ ಸಂಕಿರಣ’ ಕಾರ್ಯಕ್ರಮವನ್ನು ನಡೆಸಲಾಯಿತು.
ಪ್ರಾಂಶುಪಾಲರಾದ ಡಾ. ಪುಷ್ಟಭಾರತಿ ಆರ್.ಎ. ಅವರು ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಬಳಿಕ ಮಾತನಾಡಿದಂತ ಅವರು, ಕುವೆಂಪು ಎಂದರೇ ನಮಗೆ ಮೈ ರೋಮಾಂಚನವಾಗುತ್ತದೆ. ಕುವೆಂಪುವನ್ನು ಮತ್ತೆ ಮತ್ತೆ ಓದಲು ಅವರ ಚಿಂತನೆಗಳನ್ನು ಮರುಮನನ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶ. ಅದರಲ್ಲೂ ಈ ಕಾರ್ಯಕ್ರಮದಲ್ಲಿ ಕುವೆಂಪು ಬದುಕು-ಬರಹಗಳ ಅವಲೋಕನಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿರುವುದು ನನಗೆ ಹೆಚ್ಚು ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.
ಸುಮಾರು ಹದಿನೈದಕ್ಕೂ ಹೆಚ್ಚು ವಿದ್ಯಾರ್ಥಿಗಳು “ಕುವೆಂಪು ಬದುಕು-ಬರಹ” ಕುರಿತು ತಮ್ಮ ಪ್ರಬಂಧಗಳನ್ನು ಮಂಡಿಸಿದರು. ಕುವೆಂಪುರವರ ಮಹಾಕಾವ್ಯ, ಎರಡು ಕಾದಂಬರಿಗಳು, ನಾಟಕಗಳು, ಕಥೆಗಳು, ಅವರ ಭಾಷಣ, ವಿಮರ್ಶೆ, ಮೀಮಾಂಸೆ ಸೇರಿದಂತೆ ಕುವೆಂಪು ಸಾಹಿತ್ಯದ ವಿವಿಧ ಮಜಲುಗಳನ್ನು ಕುರಿತು ವಿದ್ಯಾರ್ಥಿಗಳು ತಮ್ಮದೇ ಆದ ವಿಚಾರ ವಿಮರ್ಶೆಗಳನ್ನು ಮಂಡಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ. ಗೋವರ್ಧನ್ ರಾತ್ಲ ಕೆ.ಎಸ್. ಅವರು ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಪೂಜ್ಯ ಸ್ಥಾನದಲ್ಲಿಟ್ಟು ಆಚರಣೆಗೆ ತರದಿದ್ದರೆ ಪ್ರಯೋಜನವಿಲ್ಲ. ಎಲ್ಲರನ್ನೂ ವಿಶ್ವಮಾನವರಾಗುವ ಹಾದಿಯಲ್ಲಿ ನಡೆಯಬೇಕು. ನಾವು ನೀವೆಲ್ಲ ಅದನ್ನು ಅನುಸರಿಸಬೇಕು ಎಂಬುದಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನು ಆಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಸುಧಾ ಎ.ಆರ್. ಅವರು ಕುವೆಂಪು ಯಾಕೆ ಮಹತ್ವದ ಕವಿ ಎಂಬುದನ್ನು ಅವರ ಕೃತಿಗಳ ಆಯ್ದ ಭಾಗಗಳ ಉಲ್ಲೇಖದೊಂದಿಗೆ ವಿವರಿಸಿದರು. ಕುವೆಂಪುರವರು ಅನುವಾದಕ್ಕೆ ಆಯ್ದುಕೊಂಡಿರುವ ಕೃತಿಗಳು ಅವರ ಮನೋಧರ್ಮವನ್ನು ತಿಳಿಸುತ್ತವೆ. ವಿಶ್ವಮಾನವ ಸಂದೇಶ ಅವರ ಒಟ್ಟು ಕೃತಿಗಳ ಸಾರವೂ ಆಗಿದೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದ ಸಂಚಾಲಕರಾದ ಡಾ. ಮೋಹನ್ ಕುಮಾರ್ ಎಂ.ಜೆ ಮಾತನಾಡಿ ಕುವೆಂಪು ಯುವಜನತೆಯ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಯುವಜನತೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮೌಢ್ಯತೆಯನ್ನು ಮೀರಬೇಕು ಎಂಬುದು ಅವರ ಆಶಯವಾಗಿತ್ತು. ಅದರಂತೆ ನೀವೂ ಪ್ರಗತಿಪರವಾಗಿ ಚಿಂತಿಸಿ, ವಿಶ್ವಮಾನವರಾಗುವ ಪ್ರಯತ್ನದಲ್ಲಿರಬೇಕು. ಕುವೆಂಪು ಧಾರೆಯ ವಾರಸುದಾರರಾಗಬೇಕು ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡ ಸಹಾಯಕ ಪ್ರಾಧ್ಯಾಪಕಿಯಾದ ನಸ್ರೀನ್ ಬಾನು ಅವರು ಕುವೆಂಪು ಅವರ ಜೀವನ ನಮಗೆ ಆದರ್ಶವಾಗಬೇಕು ಎಂದರು.
ಉಪನ್ಯಾಸಕರಾದ ಡಾ. ಸಂಪತ್ ಕುಮಾರ್ ಬಿ.ಎಸ್. ಅವರು ವಿದ್ಯಾರ್ಥಿ ವಿಚಾರ ಸಂಕಿರಣದ ಅವಲೋಕನ ಮಾಡಿದರು.
ಪರ್ವತೇಗೌಡ ಟಿ.ಕೆ. ಅವರು ಕುವೆಂಪು ಪಠ್ಯಗಳ ಭಾಗಗಳನ್ನು ಉಲ್ಲೇಖಿಸಿ ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಕುಮಾರಸ್ವಾಮಿ ಕೆ.ಸಿ. ಮತ್ತು ಇತಿಹಾಸ ವಿಭಾಗದ ಬಸವರಾಜು ಎಸ್.ಎಂ. ಅವರು ತಾವು ಕಂಡುಕೊಂಡ ಕುವೆಂಪು ಸಾಹಿತ್ಯ ವಿಚಾರಗಳನ್ನು ಮತ್ತು ತಾವು ಓದಿದ ಕುವೆಂಪು ಜೀವನದ ಘಟನೆಗಳನ್ನು ಹಂಚಿಕೊಂಡರು.
ದ್ವಿತೀಯ ಎಂ.ಎ. ವಿದ್ಯಾರ್ಥಿನಿಯರಾದ ನಮಿತಾ ಬಿ.ಎಂ ಈ ಕಾರ್ಯಕ್ರಮದ ನಿರೂಪಿಸಿದರು. ಜಯಲಕ್ಷ್ಮಿ ಎಂ.ಡಿ. ಸ್ವಾಗತಿಸಿದರು. ಬಿಂದು ಜಿ.ಎಸ್. ವಂದಿಸಿದರು. ಅನುಷ ಎಚ್.ಡಿ. ಮತ್ತು ನಮಿತಾ ಬಿ.ಎಂ. ಅವರು ಕುವೆಂಪು ಗೀತೆಗಳ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
Electricity Bill: 2 ಬಿಲಿಯನ್ ರೂಪಾಯಿ ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ವ್ಯಕ್ತಿ!
ಇಂದಿನಿಂದ ಬೆಂಗಳೂರಲ್ಲಿ 6ನೇ ಆವೃತ್ತಿಯ ‘ಅಂತರ್ ರಾಜ್ಯ ಹಾಕಿ ಕಪ್ ಪಂದ್ಯಾವಳಿ’ ಆರಂಭ: 20 ತಂಡಗಳು ಭಾಗಿ