ಚನ್ನಪಟ್ಟಣ : “ಚನ್ನಪಟ್ಟಣದ ಜನರು ಸ್ವಾಭಿಮಾನಿ ಮತದಾರರು.ಈ ಜಿಲ್ಲೆಯ ಮಗನಿಗೆ ಅವಕಾಶ ಮಾಡಿಕೊಡಿ ಎನ್ನುವ ಮನವಿಗೆ ಸ್ಪಂದಿಸಿ ಇಡೀ ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಿದ್ದೀರಿ. ನಮ್ಮ ಕೈ ಹಿಡಿದ ನಿಮ್ಮ ಋಣ ತೀರಿಸುತ್ತೇವೆ” ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ತಿಳಿಸಿದರು.
ಭಾನುವಾರ ಹಮ್ಮಿಕೊಂಡಿದ್ದ ಚನ್ನಪಟ್ಟಣ ಉಪಚುನಾವಣೆ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಅವರು ಮಾತನಾಡಿದರು.
“ಇಡೀ ರಾಜ್ಯ ಚನ್ನಪಟ್ಟಣದ ಉಪಚುನಾವಣೆಯನ್ನು ನೋಡುತ್ತಿತ್ತು. ಇದು ಅತ್ಯಂತ ಸವಾಲಿನ ಚುನಾವಣೆಯಾಗಿ ಮಾರ್ಪಾಡಾಗಿತ್ತು. ಚನ್ನಪಟ್ಟಣದ ಚುನಾವಣಾ ಇತಿಹಾಸದಲ್ಲಿ ಯೋಗೇಶ್ವರ್ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿದವರು ನೀವು. ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ನೀವು ಶಕ್ತಿ ನೀಡಿದ್ದೀರಿ” ಎಂದರು.
“ನಮ್ಮ ಸರ್ಕಾರಕ್ಕೆ ಶಕ್ತಿ ಕೊಟ್ಟ ನಿಮ್ಮ ಬದುಕನ್ನು ಹಸನು ಮಾಡುವ ಕೆಲಸ ನಾವು ಮಾಡುತ್ತೇವೆ. ಪ್ರತಿ ಮನೆಗೆ ಹೋಗಿ ನಿಮ್ಮ ಕಷ್ಟ ಸುಖ ವಿಚಾರಿಸಿದ್ದೇವೆ. ಈ ಜಿಲ್ಲೆಯ ಮನೆ ಮಗನಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯಲಾಗುವುದು” ಎಂದು ಹೇಳಿದರು.
ಬೆಂಗಳೂರು ದಕ್ಷಿಣವನ್ನು ರಾಜ್ಯದ ಪ್ರಥಮ ಜಿಲ್ಲೆ ಮಾಡುವ ಗುರಿ
“ಅನೇಕ ವಿಚಾರಗಳನ್ನು ನಾನು ಮಾತನಾಡಬಹುದು. ಆದರೆ, ಎಲ್ಲಾ ಟೀಕೆ, ಟಿಪ್ಪಣಿಗಳನ್ನು ಚುನಾವಣೆಯಲ್ಲಿಯೇ ಮಾಡಿ ಮುಗಿಸಿದ್ದೇವೆ. ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಾಜ್ಯದಲ್ಲಿ ಪ್ರಥಮ ಜಿಲ್ಲೆಯಾಗಿ ಮಾಡುವ ಸಂಕಲ್ಪ ಈಗ ನಮ್ಮ, ನಿಮ್ಮೆಲ್ಲರ ಮುಂದಿರುವ ಸವಾಲು” ಎಂದರು.
“ನಾಲ್ಕು ಜನ ಶಾಸಕರನ್ನು ಈ ಜಿಲ್ಲೆ ಕೊಟ್ಟಿದೆ. ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ನಾವು ಕೊಟ್ಟಿರುವ ಎಲ್ಲಾ ಮಾತುಗಳನ್ನು, ಜನರ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.
“ಉಪ ಚುನಾವಣೆ ವೇಳೆ ಸಾವಿರಾರು ಕಾರ್ಯಕರ್ತರು, ನೂರಾರು ಮುಖಂಡರು ಹಗಲು ರಾತ್ರಿ ಕೆಲಸ ಮಾಡಿದ್ದೀರಿ. ಸರ್ಕಾರದ ಹಲವಾರು ಸಚಿವರು, ಶಾಸಕರು ಬಂದು ಕೆಲಸ ಮಾಡಿದ್ದೀರಿ. ನಿಮಗೆಲ್ಲರಿಗೂ ಚನ್ನಪಟ್ಟಣದ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದರು.
BREAKING: ದಾವಣಗೆರೆಯಲ್ಲಿ ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
ನಿಮ್ಮ ಸಂಬಳದ ಮೇಲೆ ‘ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ’ಗಳು ಹೇಗೆ ಪರಿಣಾಮ ಬೀರುತ್ತೆ? ಇಲ್ಲಿದೆ ಮಾಹಿತಿ