ಶಿವಮೊಗ್ಗ: ಸನಾತನ ಧರ್ಮದಲ್ಲಿ ದೇವರು ಹಲವಾರುಗಳಿದ್ದರೂ ಜಾತತ್ಯೀತ ಭಾವನೆಗೆ ಬೆಲೆ ನೀಡಲಾಗಿದೆ. ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ
ದೇಶದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಹಿಂದೂ ಸಮ್ಮೇಳನಗಳು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಅಖಂಡ ಭಾರತದ ನೆಲದಲ್ಲಿ ಹುಟ್ಟಿ ಗಾಳಿ,ಬೆಳಕು, ನೀರು ಸೇವಿಸುವ ಪ್ರತಿಯೊಬ್ಬರೂ ಹಿಂದೂಗಳಾಗಿದ್ದಾರೆ. ಜಗತ್ತಿನಲ್ಲಿ ನಂಬಿಕೆ,ಆಚರಣೆ,ಶ್ರದ್ಧೆಯ ಮೂಲಕ ತನ್ನ ಶ್ರೇಷ್ಠತೆಯನ್ನು ಹೊಂದಿರುವ ಯಾವುದಾದರೂ ಧರ್ಮವಿದ್ದರೆ ಅದು ಹಿಂದೂ ಧರ್ಮ ಮಾತ್ರ. ಇಂತಹ ಪರಧರ್ಮ ಪ್ರೇಮವನ್ನು ಹೊಂದಿರುವ ನಮ್ಮ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ತಿಳಿಸಿದರು.
ದೇಶವ್ಯಾಪಿ ಹಿಂದೂ ಧರ್ಮದ ಸಾರ,ತತ್ವವನ್ನು ಸಾರಲು ಹೊರಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಸ್ತಿತ್ವಕ್ಕೆ ಬಂದು ನೂರು ವರ್ಷಗಳು ಪೂರೈಸಿದ್ದು, ಸಂಘದ ಚಟುವಟಿಕೆಗಳ ಬಗ್ಗೆ ಸಂಭ್ರಮಪಡಬೇಕು. ಜಾತಿ,ಉಪಜಾತಿಗಳನ್ನು ಮರೆತು ನಾವೆಲ್ಲರೂ ಹಿಂದೂಗಳು ಎನ್ನುವ ಭಾವನೆ ನಮಗೆ ಅಗತ್ಯವಾಗಿದೆ. ದೇಶ ವಿಭಜನೆ ನಂತರ ಅಪ್ಘಾನಿಸ್ತಾನ,ಪಾಕಿಸ್ತಾನ ಮುಂತಾದ ದೇಶಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿ ನೋವು, ಸಂಕಟ ಅನುಭವಿಸುತ್ತಿದ್ದಾರೆ. ಅಂತಹ ದುಸ್ಥಿತಿ ನಮ್ಮ ಯಾವ ಹಿಂದೂಗಳಿಗೆ ಬರದ ರೀತಿಯಲ್ಲಿ ಜಾಗೃತಿ ಮೂಡಿಸಿ ನಮ್ಮ ಧರ್ಮದ ಪ್ರಾಮುಖ್ಯತೆ ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.
ದಾವಣಗೆರೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯದ ಸಹ ಸಂಚಾಲಕ ಸತೀಶ್ ಪೂಜಾರ್ ಮಾತನಾಡಿ, ಭಾರತದ ಅಸ್ಮಿತಿ ಹಿಂದೂ ಧರ್ಮದಲ್ಲಿ ಅಡಗಿದೆ. ನಾವೂ ಹಿಂದೂ ಸಮಾಜೋತ್ಸವ ಆಚರಣೆ ಮಾಡುತ್ತಿರುವುದು ಯಾವ ಕೋಮಿನ ವಿರುದ್ಧವಲ್ಲ. ನಮ್ಮ ಜಾಗೃತಿಗಾಗಿ ಆಚರಿಸುತ್ತಿದ್ದೇವೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ನೂರು ವರ್ಷದ ವೈಭವನ್ನು ಅದ್ದೂರಿಯಾಗಿ ಆಚರಿಸಲಿಲ್ಲ. ಬದಲಾಗಿ ನಮ್ಮನ್ನು ಹೆತ್ತ ತಂದೆ,ತಾಯಿ, ಹೊತ್ತ ಭೂಮಿ ಹಾಗೂ ನಾವು ಬದುಕುತ್ತಿರುವ ಸಮಾಜ ಮತ್ತು ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗಿರುವ ಧರ್ಮದ ಋಣ ತೀರಿಸುವ ಹಿನ್ನೆಲೆಯಲ್ಲಿ ಪ್ರತಿ ಮನೆಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ ಎಂದರು.
ನಾವು ಬದುಕುತ್ತಿರುವ ನೆಲದ ಕಾನೂನಿಗೆ ಗೌರವ ನೀಡಬೇಕು. ಅಂಬೇಡ್ಕರ್ ನೀಡಿದ ಸಂವಿಧಾನವನ್ನು ನಾವೇ ಗೌರವಿಸಬೇಕು. ಹೀಗಿದ್ದಾಗ ಮಾತ್ರ ಇಲ್ಲಿ ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸಬಹುದಾಗಿದೆ. ಈ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಆಗ್ರಹಿಸಿದರು.
ಜಡೆ ಮಠದ ಡಾ.ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಹಿರಿಯರಾದ ಪಾಣಿ ರಾಜಪ್ಪ, ಪ್ರಕಾಶ್ ಅಗಸನಹಳ್ಳಿ, ರಾಜು ಕೆಂಚಿನಕೊಪ್ಪ,ಡಾ.ಜ್ಞಾನೇಶ್, ಈಶ್ವರ ಚನ್ನಪಟ್ಟಣ, ದೇವೇಂದ್ರಪ್ಪ, ಸುರೇಶ್, ಮಧುರಾಯ್ ಶೇಟ್, ಶಿವಕುಮಾರ್ ಕಡಸೂರು, ವಿಜಯೇಂದ್ರಗೌಡ ತಲಗುಂದ, ಜಯಪ್ಪಗೌಡ,ವಿನಯ್ ಶೆರ್ವಿ, ಸಂದೀಪ್, ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ವರದಿ: ರಾಘವೇಂದ್ರ ಜಂಗಿನಕೊಪ್ಪ, ಸೊರಬ
ಸೊರಬದಲ್ಲಿ ಪಕ್ಷಕ್ಕೆ ಯುವಕನ್ನು ಸೆಳೆಯಲು ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ: ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ
BREAKING: ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸಿಎಂ ಸಿದ್ಧರಾಮಯ್ಯ ಗ್ರೀನ್ ಸಿಗ್ನಲ್








