ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ತಯಾರಿ ಅಂತಿಮ ಘಟ್ಟ ತಲುಪಿದೆ. ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಶಿಕ್ಷಣ ಇಲಾಖೆಯು ಪರೀಕ್ಷಾ ಅಕ್ರಮ ತಡೆಯಲು ಮತ್ತು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಪರೀಕ್ಷಾ ವೇಳಾಪಟ್ಟಿ ಮತ್ತು ಸಮಯ
ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10:00ರಿಂದ ಮಧ್ಯಾಹ್ನ 1:00ರವರೆಗೆ ನಡೆಯಲಿವೆ. ಪ್ರಮುಖ ದಿನಾಂಕಗಳು ಹೀಗಿವೆ:
ಫೆಬ್ರವರಿ 28: ಕನ್ನಡ, ಅರೇಬಿಕ್
ಮಾರ್ಚ್ 3: ಇಂಗ್ಲಿಷ್
ಮಾರ್ಚ್ 5: ಇತಿಹಾಸ
ಮಾರ್ಚ್ 6: ಭೌತಶಾಸ್ತ್ರ
ಮಾರ್ಚ್ 9: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ
ಮಾರ್ಚ್ 10: ಅರ್ಥಶಾಸ್ತ್ರ
ಮಾರ್ಚ್ 13: ರಾಜ್ಯಶಾಸ್ತ್ರ
ಮಾರ್ಚ್ 14: ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 16: ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
ಈ ಬಾರಿಯ ವಿಶೇಷತೆಗಳೇನು?
ಇತಿಹಾಸದಲ್ಲೇ ಮೊದಲು: ಪರೀಕ್ಷೆ ಆರಂಭವಾಗುವ ಮುನ್ನವೇ ಫಲಿತಾಂಶದ ದಿನಾಂಕವನ್ನು ಘೋಷಿಸಲಾಗಿದೆ. ಏಪ್ರಿಲ್ 7, 2026 ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳ ಸಂಖ್ಯೆ: ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 6,46,801 ಹೊಸಬರಾದರೆ, 50,540 ಪುನರಾವರ್ತಿತ ಮತ್ತು 13,022 ಖಾಸಗಿ ಅಭ್ಯರ್ಥಿಗಳಿದ್ದಾರೆ.
ಪರೀಕ್ಷಾ ಕೇಂದ್ರಗಳು: ರಾಜ್ಯದ ಒಟ್ಟು 1,217 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಮತ್ತು ನಿಯಮಗಳು
ಪರೀಕ್ಷಾ ಅಕ್ರಮಗಳನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ:
144 ಸೆಕ್ಷನ್ ಜಾರಿ: ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದ್ದು, ಹತ್ತಿರದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಸಿಸಿ ಕ್ಯಾಮೆರಾ ಕಣ್ಗಾವಲು: ಎಲ್ಲಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ GPS ಸಿಸ್ಟಮ್ ಅಳವಡಿಸಲಾಗುವುದು.
ಗ್ಯಾಜೆಟ್ ನಿಷೇಧ: ವಿದ್ಯಾರ್ಥಿಗಳು ಮಾತ್ರವಲ್ಲದೆ, ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳೂ ಸಹ ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಫೋನ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ.
ವಿಶೇಷ ನಿಯಮ: ಯಾವ ವಿಷಯದ ಪರೀಕ್ಷೆ ನಡೆಯುತ್ತಿದೆಯೋ, ಆ ವಿಷಯದ ಉಪನ್ಯಾಸಕರನ್ನು ಅಂದು ಅದೇ ಕೊಠಡಿಯ ಮೇಲ್ವಿಚಾರಕರನ್ನಾಗಿ ನೇಮಿಸುವಂತಿಲ್ಲ.
ಮುಖ್ಯ ಸೂಚನೆ: ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಿಬ್ಬಂದಿಯೂ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು.
ವಿದ್ಯಾರ್ಥಿಗಳಿಗೆ ‘KSRTC’ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಸಿಹಿ ಸುದ್ದಿ ನೀಡಿದೆ. ಫೆಬ್ರವರಿ 28 ರಿಂದ ಆರಂಭವಾಗಲಿರುವ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರವೇಶ ಪತ್ರವೇ ಬಸ್ ಪಾಸ್!
ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಗಳ ಸ್ವಂತ ವಿದ್ಯಾಸಂಸ್ಥೆಗಿಂತ ಬೇರೆಡೆ ನಿಯೋಜನೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಈ ಕೆಳಗಿನ ಮಾರ್ಗಸೂಚಿಗಳ ಅನ್ವಯ ಸೌಲಭ್ಯ ಪಡೆಯಬಹುದು:
ದಿನಾಂಕ: 2026ರ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ (ಪರೀಕ್ಷೆ ನಡೆಯುವ ದಿನಗಳಂದು ಮಾತ್ರ).
ಅಗತ್ಯ ದಾಖಲೆ: ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ಮತ್ತು ಹಿಂದಿರುಗುವಾಗ ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಪ್ರವೇಶ ಪತ್ರ (Hall Ticket) ತೋರಿಸುವುದು ಕಡ್ಡಾಯ.
ಬಸ್ಸುಗಳ ವಿವರ: ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ (Ordinary & Express) ಬಸ್ಸುಗಳಲ್ಲಿ ಈ ಉಚಿತ ಪ್ರಯಾಣಕ್ಕೆ ಅವಕಾಶವಿರುತ್ತದೆ.
ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಸಾರಿಗೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.








