ಬೆಂಗಳೂರು: 2025ರ ಮಾರ್ಚ್, ಏಪ್ರಿಲ್ ನಲ್ಲಿ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯಲ್ಲಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ್ಯ ಚೌಕಟ್ಟು ಅಂದರೆ ಎನ್ ಎಸ್ ಕ್ಯೂ ಎಫ್ ಪರೀಕ್ಷಾ ಪ್ರಕ್ರಿಯೆ ಹೇಗೆ ನಡೆಸಬೇಕು ಎನ್ನುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, 2023-24ನೇ ಜಾರಿಗೆ ಬರುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಪರೀಕ್ಷೆ-1, ಪರೀಕ್ಷೆ-2 ಮತ್ತು ಪರೀಕ್ಷೆ-3 ಎಂದು ಹೆಸರಿಸಿ ಪರೀಕ್ಷೆಯನ್ನು ನಡೆಸಲಾಗುವುದು ಎಂದಿದೆ.
2025ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಎನ್.ಎಸ್.ಕ್ಯೂ.ಎಫ್ ವಿಷಯ ಅಳವಡಿತ ಒಟ್ಟು 295 ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲೆಗಳಿಂದ ಹಾಜರಾಗುವ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಶಾಲೆಗಳಿಂದ 2025ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಹಾಜರಾಗುವ ಎನ್.ಎಸ್.ಕ್ಯೂ.ಎಫ್‌ನ ಅರ್ಹ ಶಾಲಾ ವಿದ್ಯಾರ್ಥಿಗಳ (CCERF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ (CCERR) ನೋಂದಣಿಗೆ ಸಂಬಂಧಿಸಿದಂತೆ ಅಗತ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ದಿನಾಂಕ:18-10-2024ರ ಪರೀಕ್ಷಾ ಮಾರ್ಗಸೂಚಿಯಂತೆ ಮಂಡಲಿಯು ತಿಳಿಸಿರುವ ದಿನಾಂಕದಲ್ಲಿ ಶಾಲಾ ಲಾಗಿನ್‌ನಲ್ಲಿ ನೋಂದಣಿ ಮಾಡಲು ಮುಖ್ಯ ಶಿಕ್ಷಕರು ಕ್ರಮವಹಿಸುವುದು ಎಂದು ಹೇಳಿದೆ.
ಎನ್.ಎಸ್.ಕ್ಯೂ.ಎಫ್ ಪಠ್ಯಕ್ರಮವು ವಿದ್ಯಾರ್ಥಿಗಳನ್ನು ಪ್ರಗತಿಶೀಲರನ್ನಾಗಿಸಲು, ಸರ್ವತೋಮುಖ ಅಭಿವೃದ್ಧಿಗೆ ಪ್ರೇರೇಪಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ್ಯ ಚೌಕಟ್ಟು ಯೋಜನೆಯು ನಿರಂತರ ಮುಂದುವರಿಕೆ ಯೋಜನೆಯಾಗಿದ್ದು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಸಮಗ್ರ ಶಿಕ್ಷಣ-ಕರ್ನಾಟಕ ಅಡಿಯಲ್ಲಿ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸಿದೆ. ಈ ಯೋಜನೆಯ ಮುಖ್ಯ ಉದ್ದೇಶ ಸಾಮಾನ್ಯ ಶಿಕ್ಷಣದಲ್ಲಿ ವೃತ್ತಿ ಶಿಕ್ಷಣದ ವಿಷಯಗಳನ್ನು ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಅಳವಡಿಸಿ ಉದ್ಯೋಗ ನಿರ್ವಹಿಸಲು ಅಗತ್ಯ ಕೌಶಲ್ಯಗಳು ಮತ್ತು ಸಾಮರ್ಥ್ಯಗಳ ಬಗ್ಗೆ ತರಬೇತಿಯನ್ನು ನೀಡುವುದಾಗಿದೆ ಎಂದು ತಿಳಿಸಿದೆ.
ಪ್ರಾರಂಭದಿಂದ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಬ್ಯೂಟಿ ಮತ್ತು ವೆಲ್‌ನೆಸ್ ಸಕಾರ್‌ಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. 2022-23ನೇ ಸಾಲಿನಿಂದ 9ನೇ ತರಗತಿಯಿಂದ ಅಪ್ಯಾರಲ್ಸ್, ಮೇಡ್ ಅಪ್ & ಹೋಮ್ ಫರ್ನಿಷಿಂಗ್ ಮತ್ತು ಎಲೆಕ್ಟ್ರಾನಿಕ್ಸ್ & ಹಾರ್ಲ್ವೇರ್ ಈ ಎರಡು ಹೊಸ ಸೆಕ್ಟಾರ್‌ಗಳನ್ನು ಅಳವಡಿಸಲಾಗಿದೆ. ಆಯ್ಕೆಯಾದ ಪ್ರೌಢ ಶಾಲೆಗಳಲ್ಲಿ ಯಾವುದಾದರೂ ಎರಡು ಸೆಕ್ಟಾರ್‌ಗಳನ್ನು ಅಳವಡಿಸುವುದು ಹಾಗೂ ಪ್ರತಿ ಹಂತದ ಪ್ರತಿ ಸೆಕ್ಸಾರ್‌ಗೆ ಗರಿಷ್ಠ 25 ವಿದ್ಯಾರ್ಥಿಗಳನ್ನು ದಾಖಲಿಸುವುದು. ಆಂತರಿಕ ಮೌಲ್ಯಮಾಪನಕ್ಕೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ(Continuous and Comprehensive Evaluation) ಪದ್ಧತಿಯನ್ನು ಅಳವಡಿಸಿಕೊಳ್ಳುವುದು. 2023-24ನೇ ಸಾಲಿನಿಂದ 10ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಬಾರಿಗೆ ಈ 02 ಹೊಸ ಸೆಕ್ಟಾರ್‌ಗಳನ್ನೊಳಗೊಂಡಂತೆ ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾಗಿರುತ್ತದೆ. ಸರ್ಕಾರದ ಆದೇಶದ ಸಂಖ್ಯೆ:ಇಡಿ.59.ಎಂ.ಸಿ.ಡಿ.2016, ದಿನಾಂಕ:16.06.2016 ರನ್ವಯ ರಾಜ್ಯದ ಆಯ್ದ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ ಅನುಷ್ಟಾನಗೊಳಿಸಲಾಗುತ್ತಿರುವ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ್ಯ ಚೌಕಟ್ಟು ಯೋಜನೆಯಡಿ ವೃತ್ತಿ ಶಿಕ್ಷಣ ವಿಷಯವನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಪರೀಕ್ಷಾ ಪದ್ಧತಿಯಲ್ಲಿ ಕೆಳಕಂಡ ಬದಲಾವಣೆ ಮಾಡಿಕೊಳ್ಳಲು ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಮಲ್ಲೇಶ್ವರಂ, ಬೆಂಗಳೂರು ರವರಿಗೆ ಕೆಳಕಂಡ ಷರತ್ತುಗಳಂತೆ ಅನುಮತಿಸಿ ಆದೇಶಿಸಲಾಗಿದೆ.
ಷರತ್ತುಗಳು:-
1. 9 ಮತ್ತು 10ನೇ ತರಗತಿಯಲ್ಲಿ ವೃತ್ತಿ ಶಿಕ್ಷಣ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಯು ತೃತೀಯ ಭಾಷೆಯ ಬದಲಿಗೆ ಆ ಶಾಲೆಯಲ್ಲಿ ಅಳವಡಿಸಲಾದ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ ಹಾಗೂ ಬ್ಯೂಟಿ & ವೆಲ್‌ನೆಸ್ ಹಾಗೂ ಎರಡು ಹೊಸ ಸೆಕ್ಟರ್‌ಗಳಾದ ಅಪ್ಯಾರಲ್ಸ್, ಮೇಡ್ ಅಪ್ & ಹೋಮ್ ಫರ್ನಿಷಿಂಗ್ ಮತ್ತು ಎಲೆಕ್ಟ್ರಾನಿಕ್ಸ್ & ಹಾರ್ಡ್‌ವೇರ್ ಗಳಿಂದಲೂ ಯಾವುದಾದರೂ ಒಂದು ಸೆನ್ಸಾರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
2. ವೃತ್ತಿ ಶಿಕ್ಷಣ ವಿಷಯವನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ತಾತ್ವಿಕ(ಥಿಯರಿ) ಪರೀಕ್ಷೆಯನ್ನು ಪರೀಕ್ಷಾ ಮಂಡಳಿಯು ಹಾಗೂ ಪ್ರಾಯೋಗಿಕ ಪರೀಕ್ಷೆಯನ್ನು ಸೆಕ್ಟರ್ ಸ್ಕಿಲ್ ಕೌನ್ಸಿಲ್ ಸಂಸ್ಥೆಗಳ ಮೂಲಕ ನಡೆಸಲಾಗುವುದು.
3. ವೃತ್ತಿ ಶಿಕ್ಷಣ ವಿಷಯವನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಕೆಳಗಿನಂತೆ ಪರೀಕ್ಷೆಗಳನ್ನು ನಡೆಸಲಾಗುವುದು:-
ಎ) ಆಂತರಿಕ ಮೌಲ್ಯಮಾಪನ -20 ಅಂಕಗಳು
ಬಿ) ತಾತ್ವಿಕ(ಥಿಯರಿ)ಪರೀಕ್ಷೆ – 30 ಅಂಕಗಳು
ಸಿ) ಪ್ರಾಯೋಗಿಕ ಪರೀಕ್ಷೆ -50 ಅಂಕಗಳು
4. ವೃತ್ತಿ ಶಿಕ್ಷಣ ವಿಷಯವನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಅಯಾ ವಿಷಯದಲ್ಲಿ ತೇರ್ಗಡೆಯಾಗಲು ತಾತ್ವಿಕ ಪರೀಕ್ಷೆಯಲ್ಲಿ ಕನಿಷ್ಟ 10 ಅಂಕಗಳನ್ನು ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ಕನಿಷ್ಠ 18 ಅಂಕಗಳನ್ನು ಗಳಿಸಬೇಕು. ಆಂತರಿಕ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ನು ವಿದ್ಯಾರ್ಥಿಗೆ ನೀಡಲಾಗುವ ಪ್ರಮಾಣ ಪತ್ರದಲ್ಲಿ ನಮೂದಿಸಲಾಗುವುದು. ಇದನ್ನು ತೇರ್ಗಡೆಗೆ ಪರಿಗಣಿಸಲಾಗುವುದಿಲ್ಲ.
5. ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ನೀಡುವಾಗ ಪ್ರಸ್ತುತ ಒಂದೇ ಅಂಕಪಟ್ಟಿ ಪದ್ಧತಿಯನ್ನು ಮುಂದುವರೆಸುವುದು ಹಾಗೂ ಅದರಲ್ಲಿ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳತಕ್ಕದ್ದು.
6. ವೃತ್ತಿ ಶಿಕ್ಷಣದ ತಾತ್ವಿಕ ಪರೀಕ್ಷೆಯಲ್ಲಿ ಅಭ್ಯರ್ಥಿಯು ತೇರ್ಗಡೆ ಹೊಂದದಿದ್ದಲ್ಲಿ ಪೂರಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು.
7. ವೃತ್ತಿ ಶಿಕ್ಷಣದ ವಿಷಯವನ್ನು ವಿನಾಯಿತಿ ಪಡೆದ ತೃತೀಯ ಭಾಷೆಗೆ ಸಮಾನಾಂತರ ಎಂದು ಪರಿಗಣಿಸಲಾಗುವುದು.
ತಾತ್ವಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ, ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲಿ ಪುನರಾವರ್ತಿತ ಅಭ್ಯರ್ಥಿಯಾಗಿ ತಾತ್ವಿಕ ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಮನಃ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ತಾತ್ವಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಲ್ಲಿ, ಪೂರಕ ಪರೀಕ್ಷೆ ಇರುವುದಿಲ್ಲ. ಆದ್ದರಿಂದ ಪುನರಾವರ್ತಿತ ಅಭ್ಯರ್ಥಿಯಾಗಿ ಮುಂದಿನ ಮುಖ್ಯ ಪರೀಕ್ಷೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವುದು. ಈ ನಿಟ್ಟಿನಲ್ಲಿ ಶಾಲಾ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ Project work/Portfolio/ ಆಂತರಿಕ ಮೌಲ್ಯಮಾಪನ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಮತ್ತು ಪೂರ್ವಸಿದ್ಧತೆ ಮಾಡಿಕೊಳ್ಳುವುದು.
ವಿದ್ಯಾರ್ಥಿಗಳಿಗೆ ತಾತ್ವಿಕ ಪಠ್ಯವನ್ನು ಬೋಧನೆ ಮಾಡುವುದರ ಜೊತೆಯಲ್ಲಿಯೇ ಆ ವಿದ್ಯಾರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೂ ಸಹ ತಯಾರಾಗುವಂತೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಮಾರ್ಚ್‌ನಲ್ಲಿ ನಿಗದಿತ ದಿನಾಂಕಗಳಲ್ಲಿ ನಡೆಯುವ ಪ್ರಾಯೋಗಿಕ ಪರೀಕ್ಷೆಗೆ ಎಲ್ಲಾ ವಿದ್ಯಾರ್ಥಿಗಳನ್ನು ಹಾಜರುಪಡಿಸುವುದು ಆಯಾ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ ಎಂದಿದೆ.
ಎನ್.ಎಸ್.ಕ್ಯೂ.ಎಫ್ ನ ಎಲ್ಲಾ ಶಾಲಾ ವಿದ್ಯಾರ್ಥಿಗಳು ಆಯಾ ವರ್ಷವೇ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗುವುದು ಮತ್ತು ತಾತ್ವಿಕ ಪರೀಕ್ಷೆಗೂ ಸಹ ಹಾಜರಾಗಿ ಉತ್ತೀರ್ಣರಾಗುವುದು, ಅಂತಹ ವಿದ್ಯಾರ್ಥಿಗಳು ಮಂಡಲಿ ಹಾಗೂ ಎನ್.ಎಸ್.ಡಿ.ಸಿ ವತಿಯಿಂದ ವಿತರಿಸುವ ಜಂಟಿ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಹರಿರುತ್ತಾರೆ. ಉನ್ನತ ವ್ಯಾಸಂಗ/ಉದ್ಯೋಗ ಬಯಸುವ ವಿದ್ಯಾರ್ಥಿಗಳಿಗೆ ಈ ಜಂಟಿ ಪ್ರಮಾಣ ಪತ್ರಗಳು ಪ್ರಮುಖ ದಾಖಲೆಗಳಾಗಿರುತ್ತವೆ, ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ನಡೆಯುವ ಪ್ರಾಯೋಗಿಕ ಪರೀಕ್ಷೆಗೆ ಗೈರಾಗುವ ವಿದ್ಯಾರ್ಥಿಗಳಿಗೆ ಜಂಟಿ ಪ್ರಮಾಣ ಪತ್ರಗಳನ್ನು ವಿತರಿಸಲು ಅಡಚಣೆಗಳಾಗುವ ಸಾಧ್ಯತೆಗಳಿರುವುದರಿಂದ ಯಾವುದೇ ವಿದ್ಯಾರ್ಥಿಯು ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳುವುದು ಮುಖ್ಯ ಶಿಕ್ಷಕರ ಆದ್ಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ನಿರ್ವಹಿಸುವುದರ ಜೊತೆಯಲ್ಲಿಯೇ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಹಾಜರು ಪಡಿಸಲು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವುದು ಆಯಾ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ತಪ್ಪಿದ್ದಲ್ಲಿ ಮುಖ್ಯ ಶಿಕ್ಷಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಹೇಳಿದೆ.