ಬೆಂಗಳೂರು : ಇಇಡಿಎಸ್ ತಂತ್ರಾಂಶದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ಗಣಕೀಕರಿಸಿ ಪರಿಶೀಲನಾ ವರದಿ ಸಲ್ಲಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನಲ್ಲಿ ಶಿಕ್ಷಕರ ಕೋರಿಕೆ ವರ್ಗಾವಣೆಗೆ ಸಂಬಂಧಿಸಿದ ಪೂರ್ವಭಾವಿ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತಿರುವುದರಿಂದ ಶಿಕ್ಷಕರ ಸೇವಾವಿವರಗಳನ್ನು ಅವರ ಸೇವಾವಹಿಯಂತೆ ಪರಿಶೀಲಿಸಿ ಇಇಡಿಎಸ್ ತಂತ್ರಾಂಶದಲ್ಲಿ ಗಣಕೀಕರಿಸಿ ಅಂತಿಮಗೊಳಿಸುವಂತೆ ಹಾಗೂ ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲಾ ವ್ಯಾಪ್ತಿಯ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಉಲ್ಲೇಖಿತ ಸುತ್ತೋಲೆ ಪ್ರತಿಯಲ್ಲಿ ನಿರ್ದಿಷ್ಟಪಡಿಸಲಾಗಿರುತ್ತದೆ.
ಈ ನಡುವೆ ದಿನಾಂಕ:26/03/2024 ರವರೆಗೆ ಶಿಕ್ಷಕರ ವರ್ಗಾವಣೆ ತಂತ್ರಾಂಶದಲ್ಲಿ ಶಾಲೆಗಳ ಬದಲಾಗಿರುವ ವಲಯಗಳ ಗಣಕೀಕರಣ ಕಾರ್ಯವನ್ನು ಕೈಗೊಂಡಿದ್ದು ತಾಂತ್ರಿಕ ಕಾರಣಕ್ಕೆ ಇಇಡಿಎಸ್ ತಂತ್ರಾಂಶವನ್ನು Freeze ಮಾಡಲಾಗಿತ್ತು.
‘ಈಗ ಇಇಡಿಎಸ್ ತಂತ್ರಾಂಶವನ್ನು Un Freeze ಮಾಡಲಾಗಿದ್ದು ಎಲ್ಲಾ ಬಟವಾಡೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರ ಸೇವಾವಿವರಗಳನ್ನು ಅವರ ಸೇವಾವಹಿಯಂತೆ ಪರಿಶೀಲಿಸಿ ಇಇಡಿಎಸ್ ತಂತ್ರಾಂಶದ ಯಾವುದೇ ಅಂಕಣಗಳು ಖಾಲಿ ಉಳಿಯದಂತೆ ಸಮರ್ಪಕ ಮತ್ತು ಕರಾರುವಕ್ಕಾದ ವಿವರಗಳನ್ನು ಗಣಕೀಕರಿಸಲು ತಿಳಿಸಿದೆ.
ಸದರಿ ವಿಷಯದಲ್ಲಿ ನಿರ್ಲಕ್ಷ್ಯವಹಿಸದೇ ಜವಾಬ್ದಾರಿಯುತವಾಗಿ ಪ್ರಥಮಾದ್ಯತೆ ಮೇರೆಗೆ ಪರಿಗಣಿಸಿ ಸದರಿ ಕಾರ್ಯವನ್ನು ಪೂರೈಸುವುದು. ಒಂದು ವೇಳೆ ತಮ್ಮ ಉದಾಸೀನತೆಯಿಂದ ವ್ಯತ್ಯಯಗಳುಂಟಾಗಿ ಶಿಕ್ಷಕರ ವರ್ಗಾವಣೆ ಸಮಯದಲ್ಲಿ ಲೋಪ ಉಂಟಾದಲ್ಲಿ ಸಂಬಂಧಿಸಿದ ಬಟವಾಡೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು.
ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು ಮೇಲ್ವಿಚಾರಣೆ ಕೈಗೊಂಡು ಕಾರ್ಯ ಪೂರೈಕೆ ಆಗಿರುವ ಬಗ್ಗೆ ಖಾತರಿ ಪಡಿಸಿಕೊಂಡು ಪರಿಶೀಲನಾ ವರದಿಯನ್ನು ತುರ್ತಾಗಿ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ.