ಮಂಡ್ಯ : ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಉತ್ಪಾದಿಸಿ, ಬಳಸಿದರೆ ಭಾರತ ಸ್ವಾವಲಂಬಿ ಮತ್ತು ಬಲಿಷ್ಠ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬ್ರಿಗೇಡಿಯರ್ ಮಾಜಿ ಸೈನಿಕ ರವಿ ಮುನಿಸ್ವಾಮಿ ಅಭಿಪ್ರಾಯಪಟ್ಟರು.
ಸ್ವದೇಶಿ ವಸ್ತು ಬಳಸಿ ದೇಶ ಉಳಿಸಿ ಅಭಿಯಾನದ ಅಂಗವಾಗಿ ಮಾಜಿ ಯೋಧರು, ನಿವೃತ್ತ ಕೆಎಎಸ್, ಐಎಎಸ್ ಅಧಿಕಾರಿಗಳು ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದೊಂದಿಗೆ ಬೆಂಗಳೂರಿನಿಂದ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಶನಿವಾರ ಮದ್ದೂರು ತಾಲೂಕಿನ ಸೋಮನಹಳ್ಳಿ ಸಿಪಾಯಿ ಹೋಟೆಲ್ ಬಳಿ ಆಗಮಿಸಿದಾಗ ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ನೇತೃತ್ವದಲ್ಲಿ ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಯಿತು.
ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಮುನಿಸ್ವಾಮಿ ಅವರು, ಪ್ರಧಾನಿ ಮೋದಿಯವರು ದೇಶವನ್ನು ವಿಶ್ವಗುರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ, ಅವರು ದೇಶದ ಸೈನಿಕರು, ರೈತರು ಹಾಗೂ ಬಡವರಿಗೆ ನಿರಂತರವಾಗಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಾ ದೇಶ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸ್ವದೇಶಿ ದೇಶಪ್ರೇಮ ಹಾಗೂ ರಾಷ್ಟ್ರಭಕ್ತಿಗೆ ಬೇರೆ ಹೋಲಿಕೆಯಿಲ್ಲ. ಸ್ವಾತಂತ್ರ್ಯ, ಸ್ವಾಭಿಮಾನ ಆರ್ಥಿಕ ಶಕ್ತಿಯನ್ನು ಬಲಪಡಿಸುವುದಾಗಿದೆ. ಸ್ವದೇಶಿಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ರೀತಿಯ ಜಾಥಾಗಳನ್ನು ನಡೆಸಿ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದ್ದು, ಹೀಗಾಗಿ ನಮ್ಮ ತಂಡ 37 ದಿನಗಳ ಕಾಲ ಜಾಥಾವನ್ನು ಕೈಗೊಂಡಿದ್ದು, ಇದರಲ್ಲಿ 3 ಮಹಿಳೆಯರು, 13 ಪುರುಷರನ್ನು ಒಳಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಜನವರಿ 20 ಕ್ಕೆ ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ ಎಂದು ಬ್ರಿಗೇಡಿಯರ್ ಮಾಜಿ ಸೈನಿಕ ರವಿ ಮುನಿಸ್ವಾಮಿ ತಿಳಿಸಿದರು.
ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ಮಾತನಾಡಿ, ಭಾರತ ಸಾಹಿತ್ಯ, ಸಂಸ್ಕೃತಿಗಳ ತವರೂರು, ಪ್ರತಿಭಾವಂತರ ನೆಲೆಬೀಡು. ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಏನು ಬೇಕೋ ಅವೆಲ್ಲವೂ ಇಲ್ಲಿ ಲಭ್ಯವಿವೆ. ಆದರೆ ಅದರ ಬಳಕೆ ಸಮರ್ಪಕವಾಗದೆ ಎಲ್ಲವೂ ನಶಿಸುತ್ತಾ ಸಾಗಿವೆ. ಇದನ್ನರಿತ ವಿದೇಶಿ ಕಂಪೆನಿಗಳು ಭಾರತದಿಂದಲೇ ಕಚ್ಚಾವಸ್ತುಗಳನ್ನು ಪಡೆದು ಸಿದ್ಧ ವಸ್ತುಗಳನ್ನು ತಯಾರಿಸಿ, ಇಲ್ಲಿಗೇ ತಂದು ಮಾರುತ್ತಿವೆ. ಆದರೆ ಹೆಸರು ಮಾತ್ರ ವಿದೇಶದ್ದು. ನಮ್ಮ ಜನ ಇಂತಹ ವಸ್ತುಗಳಿಗೆ ಮಾರು ಹೋಗಿ ಅದರ ಬೆಲೆಯನ್ನು ಲೆಕ್ಕಿಸದೇ ಖರೀದಿಸುತ್ತಾರೆ. ಇದರ ಫಲವೇ ನಿರುದ್ಯೋಗದ ಸಮಸ್ಯೆಯಾಗಿದೆ. ಸ್ಥಳೀಯವಾಗಿ ಲಭ್ಯವಾಗುವ ವಸ್ತುಗಳನ್ನು ಸರಿಯಾಗಿ ಬಳಸಿಕೊಂಡರೆ ಕೆಲವೇ ವರ್ಷಗಳಲ್ಲಿ ಭಾರತ ಸದೃಢ, ಸ್ವಾಭಿಮಾನಿ ರಾಷ್ಟ್ರವಾಗಿ ಹೊರಹೊಮ್ಮುತ್ತದೆ ಎಂಬುದನ್ನು ನಮ್ಮ ಯುವಜನ ಅರಿಯಬೇಕಿದೆ ಎಂದು ಹೇಳಿದರು.
ಇದೇ ವೇಳೆ ಮಾಜಿ ಮೇಜರ್ ಜನರಲ್ ಎವಿಕೆ ಮೋಹನ್, ರಮೇಶ್ ನರಸಯ್ಯ, ಮಾಜಿ ಸೈನಿಕ ವೇದಮೂರ್ತಿ, ಮೀರಾರಾಮ್ ನಾರಾಯಣ್, ಮಿತ್ರಶೆಣೈ, ಅಶೋಕ ಗುಲಾಟಿ, ಕರ್ನಲ್ ಕಂದಸ್ವಾಮಿ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲರಾಜು, ಮಾಜಿ ಸೈನಿಕರಾದ ಚೌಡೇಗೌಡ, ಶಿವಲಿಂಗಯ್ಯ, ಬಸವರಾಜು, ವೆಂಕಟರಾಮು, ಕೆ.ಟಿ.ಚಂದ್ರು, ಸುರೇಶ್, ಪ್ರತಾಪ್, ಎಂ.ಶ್ರೀನಿವಾಸ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಯೂಟ್ಯೂಬ್ ನಲ್ಲಿ ನವೀನ್ ಸಜ್ಜು ಅವರ ‘ಕೊಣಾನೆ ಸಾಂಗ್’ ಸಖತ್ ಸದ್ದು: ಸೋಷಿಯಲ್ ಮೀಡಿಯಾದಲ್ಲಿ ಪುಲ್ ವೈರಲ್








