ಪುಣೆ: ವಿನಾಯಕ ದಾಮೋದರ ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಒಟ್ಟು ಐದು ಬಾರಿ ಕ್ಷಮಾದಾನದ ಅರ್ಜಿಗಳನ್ನು ಸಲ್ಲಿಸಿದ್ದರು ಎಂಬ ಮಹತ್ವದ ಮಾಹಿತಿಯನ್ನು ಅವರ ಮರಿಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪುಣೆಯ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ಸಾತ್ಯಕಿ ಈ ಹೇಳಿಕೆ ನೀಡಿದ್ದಾರೆ. ಸಾವರ್ಕರ್ ಅವರು ಗೋವನ್ನು ‘ದೇವರೆಂದು’ ಪೂಜಿಸುವ ಬದಲು, ಅದನ್ನೊಂದು ‘ಉಪಯುಕ್ತ ಪ್ರಾಣಿ’ ಎಂದು ಪರಿಗಣಿಸಿದ್ದರು ಎಂದು ಸಾತ್ಯಕಿ ಕೋರ್ಟ್ಗೆ ತಿಳಿಸಿದರು.
ಅಂಡಮಾನ್ ಜೈಲಿನಲ್ಲಿದ್ದಾಗ ಸಾವರ್ಕರ್ ಅವರು ಬ್ರಿಟಿಷರಿಗೆ ಐದು ಬಾರಿ ಕ್ಷಮಾದಾನದ ಅರ್ಜಿಗಳನ್ನು ಸಲ್ಲಿಸಿದ್ದರು. ಆ ಕಾಲಘಟ್ಟದಲ್ಲಿ ರಾಜಕೀಯ ಕೈದಿಗಳು ಇಂತಹ ಅರ್ಜಿಗಳನ್ನು ಸಲ್ಲಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿತ್ತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತೀಯ ಯುವಕರು ಬ್ರಿಟಿಷ್ ಸೇನೆಗೆ ಸೇರ್ಪಡೆಯಾಗಬೇಕೆಂದು ಸಾವರ್ಕರ್ ಕರೆ ನೀಡಿದ್ದರು. ಭಾರತೀಯರು ಮಿಲಿಟರಿ ಮತ್ತು ಶಸ್ತ್ರಾಸ್ತ್ರ ಬಳಕೆಯ ತರಬೇತಿ ಪಡೆಯಬೇಕು, ಇದು ಮುಂದೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ರಾಷ್ಟ್ರದ ರಕ್ಷಣೆಗೆ ಅನುಕೂಲವಾಗಲಿದೆ ಎಂಬ ದೂರದೃಷ್ಟಿ ಅವರದ್ದಾಗಿತ್ತು ಎಂದು ಸಾತ್ಯಕಿ ವಿವರಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
2023ರಲ್ಲಿ ಸಾವರ್ಕರ್ ಕುರಿತು ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆಯ ವಿರುದ್ಧ ಸಾತ್ಯಕಿ ಸಾವರ್ಕರ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಸದ್ಯ ಪುಣೆ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.








