ಬೆಳಗಾವಿ : ಭಾಷೆ, ಗಡಿಗಳನ್ನು ಮೀರಿ ನಿಂತಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ಕೊರಗು ನಮ್ಮೆಲ್ಲರಲ್ಲಿದೆ. ಆದರೆ ಈ ಕಾಯುವಿಕೆಗೆ ಈಗ ಅಂತ್ಯಕಾಲ ಬಂದಿದೆ. ಅಭಿವೃದ್ಧಿಯ ಪರ್ವಕಾಲ ಈಗ ಆರಂಭವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಸವದತ್ತಿಯಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ಚಿಂತನೆ ಅಳವಡಿಸಿಕೊಂಡಿದ್ದಾರೆ, ಕಾಯಕವೇ ಕೈಲಾಸ ಎನ್ನುವ ತತ್ವ ಅಳವಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಕಳೆದ 40 ವರ್ಷದಿಂದ ಕಪ್ಪು ಚುಕ್ಕೆ ಇಲ್ಲದೆ ರಾಜ್ಯದ ಸೇವೆ ಮಾಡುತ್ತಿದ್ದಾರೆ ಎಂದು ಹೆಬ್ಬಾಳಕರ್ ಹೇಳಿದರು.
ನಮ್ಮ ಸರಕಾರ ಕೊಟ್ಟ ಭಾಷೆಯಂತೆ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಆರೋಪಗಳು ಅಪ್ರಸ್ತುತ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರು ಈಗಾಗಲೇ ಸಂಕಲ್ಪ ಮಾಡಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಭಕ್ತರಿಗೆ ಪ್ರಿಯವಾದ ದೇವಸ್ಥಾನ ಸವದತ್ತಿ ಯಲ್ಲಮ್ಮ ದೇವಸ್ಥಾನ. ಭಾಷೆ, ಸೀಮೆ ಮೀರಿರುವ ದೇವಸ್ಥಾನ ಇದು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ, ಲೋಕೋಪಯೋಗಿ ಇಲಾಖೆಯಿಂದ ಹಾಗೂ ಮಹಿಳಾ ಅಭಿವೃದ್ಧಿ ನಿಗಮದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇನ್ನೂ ವಿವಿಧ ಹಂತಗಳಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಶಾಸಕ ವಿಶ್ವಾಸ ವೈದ್ಯ ಅವರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಹಿಳಾ ಅಭಿವೃದ್ಧಿ ನಿಗಮದಿಂದ 10 ಕೋಟಿ ರೂ ವೆಚ್ಚದಲ್ಲಿ 48 ಮಳಿಗೆಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳಿಗೆ ನಿರ್ಮಾಣ ಮಾಡಲಾಗುವುದು ಎಂದು ಹೆಬ್ಬಾಳಕರ್ ತಿಳಿಸಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಆಸಕ್ತಿಯಿಂದ ಮಳಿಗೆಗಳನ್ನು, ಅತಿಥಿ ಗೃಹಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಶ್ಲಾಘಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಜರಾಯಿ ಹಾಗೂ ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿ, ವಾಯವ್ಯ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷರಾದ ಭರಮಗೌಡ ಕಾಗೆ, ಶಾಸಕರಾದ ವಿಶ್ವಾಸ್ ವೈದ್ಯ, ಬಾಬಾಸಾಹೇಬ್ ಪಾಟೀಲ, ಆಸಿಫ್(ರಾಜು) ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ವಿ.ರಾಜೇಂದ್ರ, ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.
‘ಮುಂಬೈ ಇಂಡಿಯನ್ಸ್’ ಮುಖ್ಯ ಕೋಚ್ ಆಗಿ ‘ಮಹೇಲಾ ಜಯವರ್ಧನೆ’ ಮರು ನೇಮಕ | Mahela Jayawardene