ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಎರಡು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಈ ಬೇಡಿಕೆ ಈಡೇರಿಸಿದಂತ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್ ಸಂತೋಷ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಾಜ್ಯ ಸರ್ಕಾರವು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಹಾಗೂ ಸಮಗ್ರ ವೇತನ ಪ್ಯಾಕೇಜ್ ಎಂಬಂತ ಎರಡು ಪ್ರಮುಖ ಬೇಡಿಕೆಯನ್ನು ಈಡೇರಿಸಿದೆ ಎಂದರು.
ರಾಜ್ಯ ಸರ್ಕಾರದ ಸಮಗ್ರ ವೇತನ ಪ್ಯಾಕೇಜ್ ಕಾರಣದಿಂದ ಸರ್ಕಾರಿ ನೌಕರರು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ಬ್ಯಾಂಕುಗಳ ಜೊತೆಗಿನ ಒಡಂಬಡಿಕೆಯಿಂದ ಸರ್ಕಾರಿ ನೌಕರರಿಗೆ ಕ್ಷಣಾರ್ಧದಲ್ಲಿ ಗೃಹ, ವಾಹನ, ಉನ್ನತ ಶಿಕ್ಷಣ ಸಾಲ ಸೇರಿದಂತೆ ಇತರೆ ಸೌಲಭ್ಯಗಳು ದೊರೆಯುವಂತೆ ಆಗಲಿದೆ ಎಂದರು.
ರಾಜ್ಯ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ಅಕಾಲಿಕ ಮರಣಹೊಂದಿದರೇ ಅವರ ಅವಲಂಭಿತರಿಗೆ ನೀಡಲಾಗುತ್ತಿದ್ದಂತ ಪರಿಹಾರವನ್ನು 50 ಲಕ್ಷದಿಂದ 1 ಕೋಟಿಗೆ ಹೆಚ್ಚಳ ಮಾಡಿದೆ. ನೌಕರರು, ಅವಲಂಭಿತ ಕುಟುಂಬಸ್ಥರು ಅನಾರೋಗ್ಯಕ್ಕೆ ಒಳಗಾದಾಗ ರಾಜ್ಯ ಸರ್ಕಾರದ ಆರೋಗ್ಯ ಸಂಜೀನಿ ಯೋಜನೆಯಡಿ ಉಚಿತ ಚಿಕಿತ್ಸೆ ದೊರೆಯುವಂತ ಕೆಲಸವನ್ನು ಸರ್ಕಾರ ಮಾಡಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ಓರ್ವ ಕ್ರಿಯಾಶೀಲ ಅಧ್ಯಕ್ಷರಾಗಿದ್ದಾರೆ. ಅವರ ಮುಂದಾಳತ್ವದಲ್ಲಿ ಸರ್ಕಾರದ ವಿವಿಧ ಯೋಜನೆಗಳು ನೌಕರರಿಗೆ ಲಭ್ಯವಾಗುವಂತೆ ಆಗಿದೆ ಎಂದರು.
ಶವ ಸಂಸ್ಕಾರಕ್ಕೆ ಸರ್ಕಾರ ನೀಡುತ್ತಿರುವಂತ ಆರ್ಥಿಕ ಸಹಕಾರವನ್ನು 15,000ದಿಂದ 25,000ಕ್ಕೆ ಹೆಚ್ಚಿಸಬೇಕು. ಸರ್ಕಾರಿ ನೌಕರರಿಗೆ ಹಬ್ಬಗ ಮುಂಗಡವಾಗಿ ನೀಡುವಂತ ಹಣವನ್ನು 25,000ದಿಂದ 50,000ಕ್ಕೆ ಹೆಚ್ಚಿಸಬೇಕು ಎಂಬುದಾಗಿ ಆಗ್ರಹಿಸಿದರು.
ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾದಂತ ಎನ್ ಪಿ ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಗೊಳಿಸುವತ್ತ ಕ್ರಮವಾಗಬೇಕು. ಈಗಾಗಲೇ ಈ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರವೇ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರು.
ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ರಾಜ್ಯ ಸರ್ಕಾರದ ಮುಂದೆ ಇರಿಸಿದ್ದಂತ ಅನೇಕ ಬೇಡಿಕೆಗಳನ್ನು ಈಡೇರಿಸಿದೆ. ಇನ್ನೂ ಕೆಲವಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿದೆ. ಷಡಕ್ಷರಿಯವರು ನೌಕರರ ಬೇಡಿಕೆಯನ್ನು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರು ಹಾಗೂ ಶಾಸಕರಿಗೆ ನೌಕರರ ಸಂಘ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ಈ ಸುದ್ದಿಗೋಷ್ಠಿಯ ವೇಳೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ, ಅಣ್ಣಪ್ಪ.ಡಿ.ಕೆ, ಖಜಾಂಜಿ ಸಹದೇವ ಎಸ್ ಬಡಿಗೇರಿ, ಗೌರವಾಧ್ಯಕ್ಷ ಫರ್ನಾಂಡಿಸ್, ನಿರ್ದೇಶಕಿ ವಿದ್ಯಾ ಎಂ.ಪಿ, ಶಿವರಾಜ, ನಾಗರಾಜ್, ಡಾ.ದೇವೇಂದ್ರಪ್ಪ, ಮಂಜುನಾಥ್, ಗಿರೀಶ್, ರಾಜ್ಯ ಪರಿಷತ್ ಸದಸ್ಯ ದೇವೇಂದ್ರಪ್ಪ.ಕೆ ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
BREAKING: ಲೋಕಸಭೆಯಲ್ಲಿ ಕರಾವಳಿ ಹಡಗು ಮಸೂದೆ 2024 ಅಂಗೀಕಾರ | Coastal Shipping Bill 2024
ಅಧಿಕಾರದ ದರ್ಪ- ಅಮಲನ್ನು ಇಳಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ: ಬಿವೈ ವಿಜಯೇಂದ್ರ