ನವದೆಹಲಿ:ಮಂಗಳವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಈ ವಿಕೆಟ್‌ಕೀಪರ್ ಬ್ಯಾಟರ್ ಅಮೋಘ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ಈ ಸೀಸನ್‌ನಲ್ಲಿ ಐದನೇ ಜಯ ದಾಖಲಿಸಲು ನೆರವಾದರು.
156 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಂಜು ಸ್ಯಾಮ್ಸನ್, 52 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 87 ರನ್ ಗಳಿಸಿದರು. ಕಾರ್ತಿಕ್ ಶರ್ಮಾ ಅವರೊಂದಿಗೆ ಸೇರಿ ಕೇವಲ 66 ಎಸೆತಗಳಲ್ಲಿ 114 ರನ್‌ಗಳ ಅಜೇಯ ಜೊತೆಯಾಟವಾಡಿದ ಸಂಜು, ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆಯೊಂದನ್ನು ಬರೆದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಎಸ್‌ಕೆ ತಂಡಕ್ಕೆ ಇದು 5ನೇ ಶತಕದ ಜೊತೆಯಾಟವಾಗಿದೆ. ಆದರೆ, ಸಂಜು ಸ್ಯಾಮ್ಸನ್ ಒಂದೇ ಸೀಸನ್‌ನಲ್ಲಿ ಡೆಲ್ಲಿ ತಂಡದ ವಿರುದ್ಧ ಎರಡು ಬಾರಿ 100+ ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಡೆಲ್ಲಿ ವಿರುದ್ಧ ಋತುರಾಜ್ ಗಾಯಕ್ವಾಡ್ ಅತಿ ಹೆಚ್ಚು (3) ಶತಕದ ಜೊತೆಯಾಟಗಳಲ್ಲಿ ಭಾಗಿಯಾಗಿದ್ದರೂ, ಅವುಗಳು ಬೇರೆ ಬೇರೆ ಸೀಸನ್‌ಗಳಲ್ಲಿ (2021, 2022 ಮತ್ತು 2023) ಬಂದಿದ್ದವು.
ಡೆಲ್ಲಿ ವಿರುದ್ಧ ಸಿಎಸ್‌ಕೆಯ ಪ್ರಮುಖ ಶತಕದ ಜೊತೆಯಾಟಗಳು:
ಸಂಜು ಸ್ಯಾಮ್ಸನ್ – ಕಾರ್ತಿಕ್ ಶರ್ಮಾ: 114* ರನ್ (ಮೇ 5, 2026 – ದೆಹಲಿ)
ಸಂಜು ಸ್ಯಾಮ್ಸನ್ – ಆಯುಷ್ ಮ್ಹಾತ್ರೆ: 113 ರನ್ (ಏಪ್ರಿಲ್ 11, 2026 – ಚೆನ್ನೈ)
ಋತುರಾಜ್ ಗಾಯಕ್ವಾಡ್ – ಡೆವೊನ್ ಕಾನ್ವೇ: 141 ರನ್ (2023)








