ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಯಲ್ಲಿ ಗೋಲ್ ಮಾಲ್ ಬಗ್ಗೆ ಕನ್ನಡ ನ್ಯೂಸ್ ನೌ ವರದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾದ ಎರಡೇ ದಿನದಲ್ಲಿ ಕಲ್ಮನೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ್ದಂತ ತನಿಖಾಧಿಕಾರಿಗಳು ಇಂಚಿಂಚೂ ಪರಿಶೀಲನೆ ನಡೆಸಿದ್ದರು. ಆ ಬಳಿಕ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿವೆ. ಹಾಗಾದ್ರೇ ತನಿಖಾಧಿಕಾರಿಗಳ ವರದಿಯಲ್ಲಿ ಏನಿದೆ ಎನ್ನುವ ಬಗ್ಗೆ ಸಂಪೂರ್ಣ ರಿಪೋರ್ಟ್ ಮುಂದಿದೆ ಓದಿ.
ನಿಮ್ಮ ಕನ್ನಡ ನ್ಯೂಸ್ ನೌ ಕೆಲ ತಿಂಗಳ ಹಿಂದೆ ರಾಜ್ಯದಲ್ಲೊಂದು ಬಹುದೊಡ್ಡ ಹಗರಣ: ಇಲ್ಲಿ ಸತ್ತವರು, ಅನಾರೋಗ್ಯ ಪೀಡಿತರ ಹೆಸರಿಗೂ ‘ನರೇಗಾ ಹಣ’ ಜಮಾ ಎಂಬುದಾಗಿ ಸುದ್ದಿ ಪ್ರಕಟಿಸಿತ್ತು. ಈ ಸುದ್ದಿಯ ಬೆನ್ನಲ್ಲೇ ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಹಗರಣ: ತನಿಖೆ ನಡೆಸಿ ವರದಿ ನೀಡಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದರ ಬಗ್ಗೆಯೂ ವರದಿ ಮಾಡಿತ್ತು. ಆ ಬಳಿಕ ಸಾಗರದ ‘ಕಲ್ಮನೆ ಗ್ರಾಮ ಪಂಚಾಯ್ತಿ’ ನರೇಗಾ ಹಗರಣ: ಇಂದು ಇಂಚಿಂಚೂ ತನಿಖೆ ನಡೆಸಿದ ‘ಅಧಿಕಾರಿ’ಗಳು ಮಾಡಿದ್ದರು. ತಮ್ಮ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಸಾಗರದ ಕಲ್ಮನೆ ಗ್ರಾಮ ಪಂಚಾಯ್ತಿ ನರೇಗಾ ಹಗರಣದ ಬಗ್ಗೆ ತನಿಖಾಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ಏನಿದೆ.?
ಈ ಕುರಿತಂತೆ ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಓಂಬುಡ್ಸ್ ಪರ್ಸನ್ ಕಾರ್ಯಾಲಯದ ಓಂಬುಡ್ಸ್ ಪರ್ಸನ್ ಪಿ.ಡಿ ಗಣಪತಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಆಯುಕ್ತರಿಗೆ ತಮ್ಮ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಸಾಗರ ತಾಲ್ಲೂಕು ಕಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಅನರ್ಹ ಕೂಲಿ ಕಾರ್ಮಿಕರ ಹಾಗೂ ಬೇರೆ ಊರಿನಲ್ಲಿ ನೆಲೆಸಿರುವ ಜನರ ಮತ್ತು ಮರಣ ಹೊಂದಿದ ವ್ಯಕ್ತಿಗಳ ಹೆಸರಿಗೆ ನರೇಗಾ ಯೋಜನೆಯ ಕೂಲಿ ಮೊತ್ತವನ್ನು ಜಮೆ ಮಾಡಿರುತ್ತಾರೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮೇಟ್ ಆಗಿ ಹಾಜರಾತಿ ಪಡೆದಿರುವುದಾಗಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ ಇಕ್ಕೇರಿ ಗ್ರಾಮದಲ್ಲಿ ಮಜ್ಜಿಗೇರ ಕರೆಯಿಂದ ಕೋಟೆ ಬ್ಯಾಣ ಕಾಲುವೆಯನ್ನು ಹಿಂದೆ ಜೆ.ಸಿ.ಬಿ ಯಲ್ಲಿ ಕೆಲಸ ಆಗಿದ್ದು, ಕೆಲಸದ ಅವಶ್ಯಕತೆ ಇಲ್ಲದಿದ್ರೂ ಕೆಲಸವನ್ನು ಮಾಡಿರುವ ಬಗ್ಗೆ, ಸಾಗರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಯವರಿಂದ ದೂರು ಸ್ವೀಕರಿಸಿದ್ದು, ಈ ಬಗ್ಗೆ ಜಂಟಿಯಾಗಿ ಪರಿಶೀಲಿಸಿ ವರದಿ ನೀಡುವಂತೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ದಿನಾಂಕ: 10/09/2025 ರಂದು ಈ ಕಛೇರಿಗೆ ಪತ್ರ ಬರೆದಿರುತ್ತಾರೆ ಎಂದಿದ್ದಾರೆ.
ವಿಚಾರಣಾ ನಡವಳಿಕೆ:-
ಸಾಗರ ತಾಲ್ಲೂಕು ಕಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಅನರ್ಹ ಕೂಲಿ ಕಾರ್ಮಿಕರ ಹಾಗೂ ಬೇರೆ ಊರಿನಲ್ಲಿ ನೆಲೆಸಿರುವ ಜನರ ಮತ್ತು ಮರಣ ಹೊಂದಿದ ವ್ಯಕ್ತಿಗಳ ಹೆಸರಿಗೆ ನರೇಗಾ ಯೋಜನೆಯ ಕೂಲಿ ಮೊತ್ತವನ್ನು ಜಮೆ ಮಾಡಿರುತ್ತಾರೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮೇಟ್ ಆಗಿ ಹಾಜರಾತಿ ಪಡೆದಿರುವುದಾಗಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ ಇಕ್ಕೇರಿ ಗ್ರಾಮದಲ್ಲಿ ಮಜ್ಜಿಗೇರ ಕೆರೆಯಿಂದ ಕೋಟೆ ಬ್ಯಾಣ ಕಾಲುವೆ ಹಿಂದೆ ಜೆ.ಸಿ.ಬಿ ಯಲ್ಲಿ ಕೆಲಸ ಆಗಿರುವ ಕುರಿತು ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ), ಜಿಲ್ಲಾ ಪಂಚಾಯತ್, ಶಿವಮೊಗ್ಗ, ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರು, ಜಿಲ್ಲಾ ಪಂಚಾಯತ್, ಶಿವಮೊಗ್ಗ ಮತ್ತು ನನಗೆ ದಿನಾಂಕ: 10/09/2025 ರಂದು ಖುದ್ದು ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ದೂರಿನಲ್ಲಿ ತಿಳಿಸಲಾದ ಅಂಶಗಳನ್ನು ಪರಿಶೀಲನೆ ಮಾಡಿ 03 ದಿನದ ಒಳಗೆ ವರದಿ ನೀಡಲು ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದ ದೂರಿಗೆ ಓಂಬುಡ್ಸ್ ವರ್ಸನ್ ರವರು ವರದಿ ನೀಡಲು ಅವಕಾಶ ಇಲ್ಲದೇ ಇರುವುದರಿಂದ ಕೂಲಂಕುಷವಾಗಿ ಓಂಬುಡ್ಸ್ ಪರ್ಸನ್ ರವರ ಮಾರ್ಗಸೂಚಿಯಂತೆ ಪರಿಶೀಲಿಸುವ ಸಲುವಾಗಿ ದೂರನ್ನು ದಿನಾಂಕ: 10/09/2025 ರಂದು ರಿಜಿಸ್ಟರ್ ಮಾಡಿಕೊಳ್ಳಲಾಗಿದೆ. ಆ ದಿನವೇ ಯೋಜನಾ ನಿರ್ದೇಶಕರು (ಡಿ.ಆರ್.ಡಿ.ಎ) ಮತ್ತು ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರು, ಜಿಲ್ಲಾ ಪಂಚಾಯತ್, ಶಿವಮೊಗ್ಗ, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು, ತಾಲ್ಲೂಕು ಪಂಚಾಯತ್, ಸಾಗರ ತಾಲ್ಲೂಕು ಹಾಗೂ ಇನ್ನಿತರೆ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರ ಜೊತೆಗೆ ಕಲ್ಮನೆ ಗ್ರಾಮ ಕಡತಗಳನ್ನು ಹಾಗೂ ಕಾಮಗಾರಿಗಳನ್ನು ಪಂಚಾಯತ್‌ನ ನರೇಗಾ ಕಾಮಗಾರಿಯ ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.
ದಿನಾಂಕ: 12/09/2025 ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಲ್ಮನೆ ಗ್ರಾಮ ಪಂಚಾಯತಿ, ಸಾಗರ ತಾಲ್ಲೂಕು ಇವರಿಗೆ ಪತ್ರ ಬರೆಯಲಾಗಿದ್ದು, ಹಳೆ ಇಕ್ಕೇರಿ ಗ್ರಾಮದಲ್ಲಿ ಮಜ್ಜಿಗೇರೆ ಕೆರೆಯಿಂದ ಕೋಟೆ ಬ್ಯಾಣ ಕಾಲುವೆ ಕಾಮಗಾರಿಯ ಗ್ರಾಮ ಸಭಾ ನಡವಳಿ, ಅನುಮೋದಿತ ಕ್ರಿಯಾ ಯೋಜನೆ, NMR, ಹಾಜರಾತಿ, ಜಿ.ಪಿ.ಎಸ್ ಮತ್ತು NMMS ಪೋಟೊ, ಸಾಮಗ್ರಿ ಸರಬಾಜು ಬಿಲ್ಲುಗಳು, ಕೂಲಿ ಪಾವತಿಯ ವಿವರ ಹಾಗೂ ಇನ್ನಿತರೆ ಎಲ್ಲಾ ದಾಖಲೆಗಳನ್ನು ದೃಢೀಕರಿಸಿ ಈ ಪತ್ರ ತಲುಪಿದ 07 ದಿನಗಳ ಒಳಗೆ ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ. ಹಾಗೂ ಕಲ್ಮನೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಮೇಟ್ ಆಗಿ ಕೆಲಸ ಮಾಡಿರುವ ವಿವರ, ಸದರಿಯವರ ಜಾಬ್ ಕಾರ್ಡ್ ಮತ್ತು ಅವರಿಗೆ ಪಾವತಿಯಾದ ಹಣದ ವಿವರವನ್ನು ನೀಡಲು ಸೂಚಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ದಿನಾಂಕ: 20/09/2025 ರ ಪತ್ರದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ದೂರಿನಲ್ಲಿ ತಿಳಿಸಲಾದ ಕಾಮಗಾರಿಗೆ ಸಂಬಂಧಿಸಿದಂತೆ ಗ್ರಾಮ ಸಭಾ ನಡವಳಿ, ಅನುಮೋದಿತ ಕ್ರಿಯಾ ಯೋಜನೆ, ಎನ್.ಎಂ.ಆರ್, ಹಾಜರಾತಿ, ಕೂಲಿ ಪಾವತಿ ವಿವರ, ಶ್ರೀ ಗೋಪಾಲ ಕೂಲಿ ಕಾರ್ಮಿಕ ಇವರ ಮರಣ ಪ್ರಮಾಣ ಪತ್ರ ಮತ್ತು ಇನ್ನಿತರೆ ದಾಖಲೆಗಳನ್ನು ಈ ಕಛೇರಿಗೆ ಸಲ್ಲಿಸಿರುತ್ತಾರೆ ಎಂದಿದ್ದಾರೆ.
ದೂರಿನ ತನಿಖೆಗಾಗಿ ಹಾಗೂ ಕಾಮಗಾರಿಗಳ ಮತ್ತು ಕಡತಗಳ ಪರಿಶೀಲನೆಗಾಗಿ ದಿನಾಂಕ: 09/10/2025 ರಂದು ಖುದ್ದು ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ದೂರಿನಲ್ಲಿ ತಿಳಿಸಲಾದ ಕಾಮಗಾರಿಯ ಮೂಲ ಕಡತವನ್ನು ಪರಿಶೀಲನೆ ಮಾಡಿ ನಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಂತ್ರಿಕ ಸಹಾಯಕರ ಸಮ್ಮುಖದಲ್ಲಿ ಕಾಮಗಾರಿ ನಡೆದ ಸ್ಥಳವನ್ನು ಪರಿಶೀಲನೆ ಮಾಡಿ ವಿಚಾರಣೆ ಮಾಡಲಾಯಿತು. ದಿನಾಂಕ: 09/10/2025 ರಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರು ದೂರಿಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ನೀಡಿರುತ್ತಾರೆ ಎಂದು ಹೇಳಿದ್ದಾರೆ.
ಗಮನಿಸಿದ ಅಂಶಗಳು
ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರು ನೀಡಿದ ದಾಖಲೆಗಳು ಮತ್ತು MIS ನಲ್ಲಿ ಲಭ್ಯವಿರುವ ಮಾಹಿತಿ ಹಾಗೂ ಸ್ಥಳ ಪರಿಶೀಲನೆ ಮಾಡಿದಾಗ ಈ ಕೆಳಕಂಡ ಅಂಶಗಳನ್ನು ಗಮನಿಸಲಾಗಿದೆ.
ಈ ಗ್ರಾಮ ಪಂಚಾಯತಿಯಲ್ಲಿನ ಬೇರೆ ಗ್ರಾಮದ ಕೂಲಿ ಕಾರ್ಮಿಕರಿಗೆ ಕಾಮಗಾರಿಯನ್ನು ನೀಡಿ ಹಣ ಪಾವತಿಸಿರುತ್ತಾರೆ.ಬೇರೆ ಗ್ರಾಮ ಪಂಚಾಯತಿಯ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿರುವುದು ಕಂಡು ಬಂದಿರುವುದಿಲ್ಲ. ಈ ಗ್ರಾಮ ಪಂಚಾಯತಿಯಲ್ಲಿ ಇರುವ ಅರ್ಹ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ಮಾಡಿಸಿ ಕೆಲಸ ನೀಡಿರುವುದು ಕಂಡು ಬಂದಿರುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿನ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದು ಗ್ರಾಮ ಪಂಚಾಯತಿಯ ಕರ್ತವ್ಯವಾಗಿರುತ್ತದೆ. ಆದ್ದರಿಂದ ಈ ದೂರು ಸಾಬೀತಾಗಿರುವುದಿಲ್ಲ. ಈ ಗ್ರಾಮದಲ್ಲಿ ಶ್ರೀ ಗೋಪಾಲ ಕೃಷ್ಣ ಬಿನ್ ಕನ್ನೇಗೌಡ ಇವರು ದಿನಾಂಕ: 18/03/2022 ರಂದು ಮೃತಪಟ್ಟಿರುತ್ತಾರೆ. ಸಂಬಂಧಿಸಿದ ಮರಣ ಪ್ರಮಾಣ ಪತ್ರವನ್ನು ಲಗತ್ತಿಸಿರುತ್ತಾರೆ.
ಇವರು ಮೃತರಾಗುವ ಮುಂಚೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿಯನ್ನು ಮಾಡಿದ್ದು, ಇವರಿಗೆ ಹಣ ಪಾವತಿಸಲಾಗಿದೆ. ಮೃತರಾದ ನಂತರ ಇವರಿಗೆ ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ನೀಡಿ ಕೂಲಿ ಮೊತ್ತವನ್ನು ಪಾವತಿಸಿರುವುದು MIS ನಲ್ಲಿ ಕಂಡು ಬಂದಿರುವುದಿಲ್ಲ. ಹಾಗೂ ಈ ಬಗ್ಗೆ ದಿನಾಂಕ: 08/10/2025 ರಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರು ಸಹ ದೃಢೀಕರಣವನ್ನು ನೀಡಿರುತ್ತಾರೆ. ಆದ್ದರಿಂದ ಮರಣ ಹೊಂದಿರುವ ವ್ಯಕ್ತಿಗಳ ಹೆಸರಿಗೆ ಉದ್ಯೋಗ ನೀಡಿ ಹಣ ಜಮ ಮಾಡಿರುವ ದೂರು ಸಾಬೀತಾಗಿರುವುದಿಲ್ಲ.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ದೂರು ಬಂದಾಗ ಹಳೆ ಇಕ್ಕೇರಿ ಗ್ರಾಮಸ್ಥರು ದಿನಾಂಕ: 25/06/2025 dow ಕಾಮಗಾರಿಯ ಅವಶ್ಯಕತೆ ಬಗ್ಗೆ ಗ್ರಾಮ ಪಂಚಾಯತಿಗೆ ಮನವಿ ನೀಡಿರುವುದರಿಂದ ಹಾಗೂ ಆ ದಿನವೇ ನಡೆದ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಈ ಕಾಮಗಾರಿಯ ಅವಶ್ಯಕತೆ ಬಗ್ಗೆ, ಸರ್ವಾನುಮತದಿಂದ ತೀರ್ಮಾನ ತೆಗೆದುಕೊಂಡಿರುವುದರಿಂದ, ಕಾಮಗಾರಿಯ ಅವಶ್ಯಕತೆ ಇಲ್ಲವೆಂಬ ದೂರು ಸಾಬೀತಾಗಿರುವುದಿಲ್ಲ.
ಎಂ.ಬಿಯಲ್ಲಿ ಕಾಮಗಾರಿಯನ್ನು ದಾಖಲಿಸಿ ಚೆಕ್ ಮೆಸರ್‌ಮೆಂಟ್ ಮಾಡಲಾಗಿರುತ್ತದೆ. ಆದರೆ ಎಂ.ಬಿಯಲ್ಲಿ ಪ್ರೀ ಮೆಸರ್‌ಮೆಂಟ್ ಬರೆಯದೇ ಇರುವುದು ಕಂಡು ಬಂದಿರುತ್ತದೆ.
ಮೇಲ್ಕಂಡ ಅಂಶಗಳನ್ನು ಪರಿಗಣಿಸಿ ಈ ಕೆಳಕಂಡ ಆದೇಶ
ಸಾಗರ ತಾಲ್ಲೂಕು ಕಲ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನರ್ಹ ಕೂಲಿ ಕಾರ್ಮಿಕರ ಹಾಗೂ ಬೇರೆ ಊರಿನಲ್ಲಿ ನೆಲೆಸಿರುವ ಜನರ ಮತ್ತು ಮರಣ ಹೊಂದಿದ ವ್ಯಕ್ತಿಗಳ ಹೆಸರಿಗೆ ನರೇಗಾ ಯೋಜನೆಯ ಕೂಲಿ ಮೊತ್ತವನ್ನು ಜಮೆ ಮಾಡಿರುತ್ತಾರೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮೇಟ್ ಆಗಿ ಹಾಜರಾತಿ ಪಡೆದಿರುವುದಾಗಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆ ಇಕ್ಕೇರಿ ಗ್ರಾಮದಲ್ಲಿ ಮಜ್ಜಿಗೇರ ಕೆರೆಯಿಂದ ಕೋಟೆ ಬ್ಯಾಣ ಕಾಲುವೆಯನ್ನು ಹಿಂದೆ ಜೆ.ಸಿ.ಬಿ ಯಲ್ಲಿ ಕೆಲಸ ಮಾಡಿದ್ದು, ಈಗ ಕೆಲಸದ ಅವಶ್ಯಕತೆ ಇಲ್ಲದೇ ಇದ್ದರೂ ಕೆಲಸವನ್ನು ಮಾಡಿಸಿರುವ ಬಗ್ಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲನೆ ಮಾಡಿ ವರದಿ ನೀಡಲು ಸೂಚಿಸಿದ್ದು, ಕಾಮಗಾರಿಯನ್ನು ಕೂಲಂಕುಷವಾಗಿ ತನಿಖೆ ಮಾಡಿದ್ದು ದೂರು ಸಾಬೀತಾಗಿರುವುದಿಲ್ಲ ಎಂಬುದಾಗಿ ಕ್ಲೀನ್ ಚಿಟ್ ನೀಡಿದ್ದಾರೆ.
ಕಾಲುವೆ ಕಾಮಗಾರಿಯಲ್ಲಿ ಎಂ.ಬಿಯಲ್ಲಿ ನಕ್ಷೆಯನ್ನು ಬರೆದು ಪ್ರೀ ಮಸರ್‌ಮೆಂಟ್ ಬರೆಯುವುದು ಕಡ್ಡಾಯವಾಗಿರುತ್ತದೆ. ಇದನ್ನು ಪಾಲಿಸದೇ ಇರುವುದರಿಂದ ಈ ಕಾಮಗಾರಿಯ ತಾಂತ್ರಿಕ ಸಹಾಯಕರಿಗೆ ಹಾಗೂ ತಾಂತ್ರಿಕ ಸಂಯೋಜಕರಿಗೆ ಸೂಕ್ತ ತಿಳುವಳಿಕೆ ನೀಡಲು ಶಿಪಾರಸ್ಸು ಮಾಡುತ್ತಾ, ಪ್ರಕರಣವನ್ನು ವಿಲೇವಾರಿ ಮಾಡಿ ದೂರನ್ನು ಮುಕ್ತಾಯಗೊಳಿಸಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶ
ಓಂಬುಡ್ಸ್ ಪರ್ಸನ್ ರವರ ಆದೇಶವು ಪ್ರಕರಣ ಪಕ್ಷಕಾರರಿಗೆ ಜಾರಿಯಾದ 30 ದಿನಗಳ ಒಳಗಾಗಿ ಆದೇಶದಿಂದ ಬಾದಿತರಾದ ವ್ಯಕ್ತಿಗಳು ಓಂಬುಡ್ಸ್‌ಮನ್ ಮೇಲ್ಮನವಿ ಪ್ರಾಧಿಕಾರದ ಮುಂದೆ ಲಿಖಿತವಾಗಿ ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 5ನೇ ಮಹಡಿ, ಪ್ಲಾಟ್ ನಂ. 1243, ಕೆ.ಎಸ್.ಐ.ಐ.ಡಿ.ಸಿ ಕಟ್ಟಡ, ಐ.ಟಿ ಪಾರ್ಕ್, ಸೌತ್ ಬ್ಲಾಕ್, ರಾಜಾಜಿ ನಗರ, ಬೆಂಗಳೂರು ಇಲ್ಲಿಗೆ ಅರ್ಜಿ ಸಲ್ಲಿಸಬಹುದು ಎಂಬುದಾಗಿ ಓಂಬುಡ್ಸ್ ಪರ್ಸನ್ ಪಿ.ಡಿ ಗಣಪತಿ ಅವರು ತಮ್ಮ ವರದಿಯಲ್ಲಿ ಸೂಚಿಸಿದ್ದಾರೆ.
ಸಿಇಓ, ಸರ್ಕಾರಕ್ಕೆ, ಲೋಕಾಯುಕ್ತಕ್ಕೆ ಪ್ರದೀಪ್ ದೂರು
ಅಂದಹಾಗೇ ತಮ್ಮ ದೂರಿನ ಹಿನ್ನಲೆಯಲ್ಲಿ ಓಂಬುಡ್ಸ್ ಪರ್ಸನ್ ಕಲ್ಮನೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ, ದಾಖಲೆಗಳನ್ನು, ಸ್ಥಳ ಪರಿಶೀಲನೆ ನಡೆಸಿ ಈ ರೀತಿಯಾಗಿ ನರೇಗಾ ಹಗರಣದ ಬಗ್ಗೆ ಕ್ಲೀನ್ ಚೀಟ್ ನೀಡಿರುವುದನ್ನು ಕಂಡಂತ ಪ್ರದೀಪ್ ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದಂತ ವರದಿ. ಸರಿಯಾಗಿ ತನಿಖೆ ನಡೆಸಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ತನಿಖಾಧಿಕಾರಿಗಳು ನೀಡಿರುವಂತ ಸೂಚನೆಯಂತೆ ಸಿಇಓ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸುತ್ತೇನೆ. ಸರಿಯಾದ ರೀತಿಯಲ್ಲಿ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ತನ್ನ ಹೋರಾಟ ನಿಲ್ಲುವುದಿಲ್ಲ. ಜೊತೆಗೆ ಕರ್ನಾಟಕ ಲೋಕಾಯುಕ್ತಕ್ಕೂ ಕಲ್ಮನೆ ಗ್ರಾಮ ಪಂಚಾಯ್ತಿ ನರೇಗಾ ಹಗರಣ ಸೇರಿದಂತೆ ಇತರೆ ಹಗರಣದ ಬಗ್ಗೆಯೂ ತನಿಖೆ ನಡೆಸಲು ದೂರು ನೀಡಲಿದ್ದಾರೆ ಎನ್ನಲಾಗುತ್ತಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ಸಾಗರದ ಕಲ್ಮನೆಯಲ್ಲಿ ‘ರಾಜಕೀಯ ಜಿದ್ದಿ’ಗೆ ಗೂಡು ಅಂಗಡಿ ಧ್ವಂಸ: ಇದು ಕಾನೂನು ಪಾಲಿಸಬೇಕಾದವರೇ, ಮೀರಿದ ಸುದ್ದಿ
ಸಾಗರ ತಾಲ್ಲೂಕು KUWJ ನೂತನ ಅಧ್ಯಕ್ಷ ಮಹೇಶ್ ಹೆಗಡೆಗೆ ಪತ್ರಿಕಾ ವಿತರಕರ ಸಂಘದಿಂದ ಸ್ಮಾನಿಸಿ ಅಭಿನಂದನೆ
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ








