ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರ ಆಯ್ಕೆಗೆ ನಾಳೆ (ಶನಿವಾರ) ಚುನಾವಣೆ ನಡೆಯಲಿದ್ದು, ಇಡೀ ನಗರದ ಕುತೂಹಲ ಕೆರಳಿಸಿರುವ ಈ ಹೊತ್ತಿನಲ್ಲೇ ಹಿರಿಯ ಮುಖಂಡ ಟಿ.ವಿ. ಪಾಂಡುರಂಗ ಅವರು ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಹಿರಿತನದ ಆಧಾರದಲ್ಲಿ ಆಯ್ಕೆಯಾಗುವ ಸಾಧ್ಯತೆ ಇತ್ತು
ಮಾರಿ ಸಮಿತಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟಿ.ವಿ. ಪಾಂಡುರಂಗ ಅವರು, ತಮ್ಮ ಹಿರಿತನದ ಆಧಾರದ ಮೇಲೆ ಪ್ರತಿಷ್ಠಾನದ ಅಧ್ಯಕ್ಷರಾಗಲಿದ್ದಾರೆ ಎಂಬ ದಟ್ಟವಾದ ವದಂತಿಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದವು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಇಂದು ತೆರೆ ಬಿದ್ದಿದೆ.
ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಂದ ಅಧಿಕೃತ ಸ್ಪಷ್ಟನೆ
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, “ಟಿ.ವಿ. ಪಾಂಡುರಂಗ ಅವರು ಮಾರಿಕಾಂಬಾ ಸಮಿತಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ” ಎಂದು ಅಧಿಕೃತವಾಗಿ ಘೋಷಿಸಿದರು. ಪಾಂಡುರಂಗ ಅವರು ಈಗಾಗಲೇ ಸಾಗರದ ಮತ್ತೊಂದು ಪ್ರಮುಖ ಧಾರ್ಮಿಕ ಕೇಂದ್ರವಾದ ಮಹಾಗಣಪತಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಾರಿಗುಡಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
ನಾನು ಅಧ್ಯಕ್ಷರ ಹುದ್ದೆ ಆಕಾಂಕ್ಷಿ ಅಲ್ಲ: ಟಿ.ವಿ ಪಾಂಡುರಂಗ ಸ್ಪಷ್ಟನೆ
ಈ ಕುರಿತು ಸ್ವತಃ ಸ್ಪಷ್ಟನೆ ನೀಡಿರುವ ಟಿ.ವಿ. ಪಾಂಡುರಂಗ ಅವರು, “ನಾನು ಮಾರಿಗುಡಿ ಸಮಿತಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವುಗಳಾಗಿವೆ. ದೇವಿಯ ಸೇವೆಯೇ ನನಗೆ ಮುಖ್ಯವಾಗಿದ್ದು, ಆ ಹುದ್ದೆಯ ಮೇಲೆ ನನಗೆ ಯಾವುದೇ ಹಂಬಲವಿಲ್ಲ” ಎಂದು ತಿಳಿಸಿದ್ದಾರೆ.
ನಾಳೆ ನಿರ್ಣಾಯಕ ಚುನಾವಣೆ
ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯೊಬ್ಬರು ಹಿಂದೆ ಸರಿದಿರುವುದರಿಂದ, ನಾಳೆ ನಡೆಯಲಿರುವ ಶ್ರೀ ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ತೀವ್ರ ಕುತೂಹಲ ಮೂಡಿಸಿದೆ. ಇದರ ನಡುವೆ ಮಾರಿಗುಡಿ ಅಧ್ಯಕ್ಷರ ಹುದ್ದೆಯ ರೇಸಲ್ಲಿ ಹಾಲಿ ಅಧ್ಯಕ್ಷ ನಾಗೇಂದ್ರ, ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಿರುವಂತ ಪುರುಷೋತ್ತಮ್ (ಪುಚ್ಚಿ), ಪವಿತ್ರ ನಾಗರಾಜ್, ಎಂ.ಡಿ ಆನಂದ್ ಹೆಸರುಗಳು ಮುಂಚೂಣಿಯಲ್ಲಿ ಇದ್ದಾವೆ. ಮುಂದಿನ ಅಧ್ಯಕ್ಷ ಗಾದಿ ಯಾರಿಗೆ ಒಲಿಯಲಿದೆ ಎಂಬುದನ್ನು ನಾಳೆಯ ಚುನಾವಣೆ ನಿರ್ಧರಿಸಲಿದೆ.








