ಶಿವಮೊಗ್ಗ: ಆಗಸ್ಟ್.3ರಂದು ಲೋಕ ಹಿತಕರ ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಸಾಗರದ ಪುರಪ್ಪೇಮನೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪತಂಜಲಿ.ಕೆ.ವಿ ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ವೆಂಟರಮಣ ಆಚಾರ್ ಶಿಷ್ಯ ಬಳಗದ ಪ್ರಧಾನ ಸಂಚಾಲಕ ಮ.ಸ ನಂಜುಂಡಸ್ವಾಮಿ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಾಗರದ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಾಮಾಣಿಕ ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿ ನಮ್ಮನ್ನೆಲ್ಲ ಅಗಲಿರುವಂತವರು ಎಸ್.ವೆಂಕಟರಮಣ ಆಚಾರ್ ಆಗಿದ್ದಾರೆ. ಅವರ ನೆನಪಿನಲ್ಲಿ ವೆಂಕಟರಮಣ ಆಚಾರ್ ಶಿಷ್ಯ ಬಳಗದಿಂದ ಪ್ರತಿ ವರ್ಷ ಪ್ರಾಮಾಣಿಕ ಸರ್ಕಾರಿ ಅಧಿಕಾರಿಯನ್ನು ಗುರುತಿಸಿ ಪ್ರಾಮಾಣಿಕ ಸರ್ಕಾರಿ ನೌಕರ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು.
ಪ್ರತಿ ದಿನ ಸರ್ಕಾರಿ ನೌಕರರ ಭ್ರಷ್ಟರ ಸಂಖ್ಯೆ ಹೆಚ್ಚಾಗುತ್ತಿದೆ. ದಿನ ಬೆಳಗಾದರೇ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಗಳು ಆಗುತ್ತಿವೆ. ಹೀಗೆ ಆಗುತ್ತಿರುವುದು ಸರ್ಕಾರಿ ನೌಕರರಿಗೆ ಕಳಂಕವಾಗಿದೆ. ಈಗಿನ ಸರ್ಕಾರಿ ನೌಕರರಿಗೆ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ 2024ರಲ್ಲಿ ಪ್ರಾಮಾಣಿಕ ಸರ್ಕಾರಿ ನೌಕರ ಪ್ರಶಸ್ತಿಯನ್ನು ಸಾಗರದ ಬಿಇಒ ಪರಶುರಾಮಪ್ಪ ಅವರಿಗೆ ನೀಡಲಾಗಿತ್ತು. 2025ರಲ್ಲಿ ಪುರಪ್ಪೇಮನೆಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪತಂಜಲಿ ಕೆ.ವಿ ಅವರಿಗೆ ನೀಡಲಾಗುತ್ತಿದೆ. ಪುರಪ್ಪೇಮನೆಯಲ್ಲಿನ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ದಿನಾಂಕ 03-08-2025ರ ಭಾನುವಾರದ ಮಧ್ಯಾಹ್ನ 4 ಗಂಟೆಗೆ ಪ್ರಾಮಾಣಿಕ ಸರ್ಕಾರಿ ನೌಕರ ಪ್ರಶಸ್ತಿಯನ್ನು ಡಾ.ಪತಂಜಲಿ ಕೆ.ವಿ ಅವರಿಗೆ ಪ್ರದಾನ ಮಾಡುತ್ತಿರುವುದಾಗಿ ಹೇಳಿದರು.
ಈ ಕಾರ್ಯಕ್ರಮವನ್ನು ಸಾಗರ ಶಾಸಕ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅವರು ಉದ್ಘಾಟಿಸಲಿದ್ದಾರೆ. ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅವರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಗರದ ಶಾರದಾಂಬ ದೇವಸ್ಥಾನ ಚಾರೋಡಿ, ಕೊಂಕಣಿ ಆಚಾರ್ ಸಮಾಜದ ವಿ.ಚಂದ್ರಶೇಖರ್ ವಹಿಸಲಿದ್ದಾರೆ. ಅಭಿನಂದನಾ ನುಡಿಯನ್ನು ಹಿರಿಯ ಪತ್ರಕರ್ತ ಮಾ.ವೆಂ.ಸ ಪ್ರಸಾದ್ ಆಡಿದರೇ, ಪ್ರಾಸ್ತಾವಿಕ ನುಡಿಯನ್ನು ಮ.ಸ ನಂಜುಂಡಸ್ವಾಮಿ ಆಡಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಪುರಪ್ಪೇಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದಂತ ಸುಜಾತ ದಿನೇಶ್, ಉಮಾ ಮಹೇಶ್ವರ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಎ ಆರ್, ಸಾಗರ ಸರ್ಕಾರಿ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ್.ಎಸ್, ಯಲ್ಲಮ್ಮ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ನ ಅಧ್ಯಕ್ಷ ಎಸ್ ಬಿ ರಘುನಾಥ, ಪ್ರಶಸ್ತಿ ಪುರಸ್ಕೃತರಾದಂತ ಡಾ.ಪತಂಜಲಿ ಕೆ.ವಿ ಅವರ ಪುತ್ರ, ಕೋಲಸಿರ್ಸಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದಂತ ಕೆ.ವಿ ರವೀಂದ್ರ ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸಂಚಾಲಕ ವಿ.ಶಂಕರ್ ಮಾತನಾಡಿ ಇಂದಿನ ದಿನಗಳಲ್ಲಿ ಪ್ರಾಮಾಣಿಕರ ಸರ್ಕಾರಿ ನೌಕರರು ಸಿಗೋದೇ ಕಷ್ಟವಾಗಿದೆ. ಇಂತವರ ನಡುವೆ ಸಾರ್ವಜನಿಕರ ಆಯ್ಕೆಯ ಮೇರೆಗೆ ಡಾ.ಪತಂಜಲಿ ಕೆ.ವಿ ಅವರನ್ನು ಪ್ರಾಮಾಣಿಕ ಸರ್ಕಾರಿ ನೌಕರ-2025ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಮಾಜಕ್ಕೆ ಪ್ರಾಮಾಣಿಕರನ್ನು ತೋರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆ ಮೂಲಕ ಒಂದಷ್ಟು ಪ್ರಾಮಾಣಿಕತೆಯನ್ನು ಸರ್ಕಾರಿ ನೌಕರರಲ್ಲಿ ಹುಟ್ಟು ಹಾಕುವ ಕೆಲಸ ನಮ್ಮದಾಗಿದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ವೆಂಕಟರಮಣ ಆಚಾರ್ ಶಿಷ್ಯ ಬಳಗದ ಸದಸ್ಯರಾದಂತ ಮೋಹನ್.ವೈ, ನಿವೃತ್ತ ಸೈನಿಕ ಗಂಗಾಧರ್, ಬಸವರಾಜ್ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು