ಮುಂಬೈ: ಭಾರತೀಯ ರೂಪಾಯಿ ಮೌಲ್ಯವು ಶುಕ್ರವಾರ ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ 94.85 ರ ಮಟ್ಟಕ್ಕೆ ತಲುಪಿದೆ. ಪಶ್ಚಿಮ ಏಷ್ಯಾದಲ್ಲಿ (ಅಮೆರಿಕ-ಇರಾನ್) ಉಲ್ಬಣಿಸಿರುವ ಯುದ್ಧದ ಪರಿಸ್ಥಿತಿ ಮತ್ತು ಕಚ್ಚಾ ತೈಲದ ಬೆಲೆ ಏರಿಕೆಯು ಈ ಭಾರಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಒಂದೇ ದಿನ 84 ಪೈಸೆ ಕುಸಿದು 94.81 ಕ್ಕೆ ಸ್ಥಿರವಾಯಿತು. ವಹಿವಾಟಿನ ಮಧ್ಯೆ ಇದು 94.85 ರವರೆಗೂ ತಲುಪಿ ಆತಂಕ ಮೂಡಿಸಿತ್ತು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದೆ. ಭಾರತವು ತನ್ನ ಬಳಕೆಯ ಶೇ. 80ಕ್ಕೂ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಡಾಲರ್ ಎದುರು ರೂಪಾಯಿ ದುರ್ಬಲಗೊಳ್ಳುವುದು ದೇಶದ ಆಮದು ವೆಚ್ಚವನ್ನು ಭಾರಿಯಾಗಿಸಲಿದೆ.ರೂಪಾಯಿ ಕುಸಿತದ ಬೆನ್ನಲ್ಲೇ ಹೂಡಿಕೆದಾರರು ಆತಂಕಗೊಂಡಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ತೀವ್ರವಾಗಿ ಕುಸಿದಿವೆ. ಒಂದೇ ದಿನದಲ್ಲಿ ಹೂಡಿಕೆದಾರರ ಸುಮಾರು 7 ಲಕ್ಷ ಕೋಟಿ ರೂಪಾಯಿ ಸಂಪತ್ತು ನಾಶವಾಗಿದೆ.
ಭಾರತೀಯ ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ದೊಡ್ಡ ಮಟ್ಟದಲ್ಲಿ ಹಣವನ್ನು ಹಿಂತೆಗೆದುಕೊಳ್ಳುತ್ತಿರುವುದು ರೂಪಾಯಿ ಮೇಲೆ ಒತ್ತಡ ಹೆಚ್ಚಿಸಿದೆ. ಈ ತಿಂಗಳೊಂದರಲ್ಲೇ ಸುಮಾರು 13 ಬಿಲಿಯನ್ ಡಾಲರ್ ಹೊರಹೋಗಿದೆ ಎಂದು ವರದಿಯಾಗಿದೆ.








