ಬೆಂಗಳೂರು: ಆರ್ ಎಸ್ ಎಸ್ ಪಥ ಸಂಚಲನ ಇವತ್ತು ನಿನ್ನೆಯಿಂದ ಮಾಡುತ್ತಿಲ್ಲ. ದಶಕಗಳಿಂದ ಮಾಡಿಕೊಂಡು ಬರುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್ ಎಸ್ ಎಸ್ ವಿಷಯ ಮುನ್ನೆಲೆಗೆ ತಂದಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು; ಆರ್ ಎಸ್ ಎಸ್ ಅನ್ನು ನಿಷೇಧ ಮಾಡೋದಕ್ಕೆ ಸಾಧ್ಯವಿಲ್ಲ. ನಿತ್ಯ ಯಾಕೆ ಅವರ ಬಗ್ಗೆ ಮಾತಾಡ್ತೀರ? ಅವರ ಪಾಡಿಗೆ ಅವರು ಏನು ಮಾಡಿಕೊಂಡು ಹೋಗ್ತಾ ಇದ್ದಾರೆ. ಆರ್ ಎಸ್ ಎಸ್ ಬಗ್ಗೆ ಮಾತಾಡಿ ಸಮಯ ಯಾಕೆ ವೇಸ್ಟ್ ಮಾಡ್ತೀರಾ ಎಂದು ಹರಿಹಾಯ್ದರು
ಸ್ವಲ್ಪ ದಿನ ಧರ್ಮಸ್ಥಳದ ಮೇಲೆ ಬಿದ್ದಿರಿ. ಎಸ್ ಐಟಿ ಅಂತ ಮಾಡಿ ಕಾಲಹರಣ ಮಾಡಿದಿರಿ. ಈಗ ಮಹೇಶ್ ಶೆಟ್ಟಿ ತಿಮರೋಡಿಗೆ ಒಂದು ಕೇಸಿನಲ್ಲಿ ರಿಲೀಫ್ ಸಿಕ್ಕಿದೆ. ಈ ಸರ್ಕಾರದ ಕಾಲದಲ್ಲಿ ಯಾವುದು ತಾರ್ಕಿಕ ಅಂತ್ಯಕ್ಕೆ ಹೋಗಲ್ಲ. ಸುಖಾ ಸುಮ್ಮನೆ ಕಾಲಹರಣ ಮಾಡಿಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಚಿವರು ದೂರಿದರು.
ಮೊದಲು RSS ಬಗ್ಗೆ ಮಾತಾಡೋದು ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಿ. ರಾಜ್ಯದಲ್ಲಿ ಇರೋ ಸಮಸ್ಯೆಗೆ ಪರಿಹಾರ ಕೊಡೋ ಕೆಲಸ ಮಾಡಿ. ಬರೀ ಟೀಕೆಗಳಿಂದ ಉಪಯೋಗ ಇಲ್ಲ ಎಂದು ಅವರು ಹೇಳಿದರು.
ಯಾರು ಬೇಕಾದರೂ ಸಿಎಂ ಆಗಬಹುದು:
ಸತೀಶ್ ಜಾರಕಿಹೋಳಿ ಅವರು ಸಿಎಂ ಆಗಲಿ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಬಂದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಲ್ಲಿ ಯಾರು ಬೇಕಾದರೂ ಈ ದೇಶದಲ್ಲಿ ರಾಜಕೀಯವಾಗಿ ಸಿಎಂ ಆಗಬಹುದು. ಅದು ಅವರ ಪಕ್ಷದ ವಿಚಾರ. ಯಾರನ್ನ ಸಿಎಂ ಮಾಡಬೇಕು. ಬೇಡ ಅಂತ ತೀರ್ಮಾನ ಅವರೇ ಮಾಡ್ತಾರೆ. ಅದನ್ನ ಕಟ್ಟಿಕೊಂಡು ನನಗೇನು ಆಗಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಆರ್ ಎಸ್ ಎಸ್ ನಿಷೇಧ ಮಾಡೋದು ಮುಖ್ಯವಲ್ಲ. ಯಾಕೆ ನಿತ್ಯ ಇದನ್ನ ಇಟ್ಟುಕೊಂಡು ಕೂತಿದ್ದೀರಾ? ಮೊದಲು ಜನರ ಸಮಸ್ಯೆ ಪರಿಹಾರ ಮಾಡಿ ಎಂದು ಸರ್ಕಾರದ ಮೇಲೆ ಚಾಟಿ ಬೀಸಿದರು.
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಎಸ್.ಎಲ್. ಭೋಜೇಗೌಡ, ಜವರಾಯಿಗೌಡ, ವಿವೇಕಾನಂದ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಹಾಜರಿದ್ದರು.
BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್ ಜಾರಿ
BREAKING: ಇಂದೋರ್ ನಲ್ಲಿ ಆಸ್ಟ್ರೇಲಿಯಾದ ಮಹಿಳಾ ವಿಶ್ವಕಪ್ ಆಟಗಾರ್ತಿಗಳಿಗೆ ಕಿರುಕುಳ: ಆರೋಪಿ ಬಂಧನ








