ನಾಗಪುರ:ಜೈಪುರದಲ್ಲಿ ನಡೆದ ಪ್ರತಿಭಟನೆಯ ವೇಳೆ ತಮ್ಮ ಮೇಲೆ ನಡೆದ ಭೌತಿಕ ದಾಳಿಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕೈವಾಡವಿದೆ ಎಂದು ಕಾಕ್ರಾಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಗಂಭೀರ ಆರೋಪ ಮಾಡಿದ್ದಾರೆ. ನೀಟ್ (NEET-UG) ಪರೀಕ್ಷಾ ಅಕ್ರಮದಂತಹ ನೈಜ ಮುಖ್ಯಾಂಶಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಈ ಸಂಚು ರೂಪಿಸಲಾಗಿದೆ ಎಂದು ಅವರು ದೂರಿದ್ದಾರೆ.
ನಾಗಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ದಿಪ್ಕೆ, “ನನ್ನ ಮೇಲೆ ಹಲ್ಲೆ ನಡೆಸಿದವರು ಆರ್‌ಎಸ್‌ಎಸ್‌ಗೆ ಸೇರಿದವರು. ಈ ಸರ್ಕಾರ ಅಥವಾ ಅವರ ಸಿದ್ದಾಂತದ ವಿರುದ್ಧ ಯಾರು ಧ್ವನಿ ಎತ್ತುತ್ತಾರೋ ಅವರ ಮೇಲೆ ಇಂತಹ ದಾಳಿಗಳನ್ನು ನಡೆಸುವುದು ಅವರಿಗೆ ಹೊಸದೇನಲ್ಲ,” ಎಂದು ಕಿಡಿಕಾರಿದ್ದಾರೆ.
ಗಾಂಧಿ-ಅಂಬೇಡ್ಕರ್ ಹಾದಿ: ಇಂತಹ ದಾಳಿಗಳಿಗೆ ತಾನು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, “ನಾವು ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯುವ ಸತ್ಯಾಗ್ರಹಿಗಳು. ನಮ್ಮ ಹೋರಾಟವು ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕವಾಗಿ ಮುಂದುವರಿಯಲಿದೆ,” ಎಂದು ಪ್ರತಿಪಾದಿಸಿದ್ದಾರೆ.
ನಾಗಪುರದಲ್ಲಿ ಪ್ರತಿಭಟನೆ ಯಥಾಸ್ಥಿತಿ: ಜೈಪುರದಲ್ಲಿ ಸೋಮವಾರ ಬೆಂಬಲಿಗರ ಹೆಗಲ ಮೇಲೆ ಕುಳಿತಿದ್ದಾಗ ದಿಪ್ಕೆ ಅವರ ಮೇಲೆ ಐದಾರು ಜನ ಮುಖಕ್ಕೆ ಹೊಡೆದು ಹಲ್ಲೆ ನಡೆಸಿದ್ದರು. ಈ ಘಟನೆಯ ನಡುವೆಯೂ, ಇಂದು ಸಂಜೆ 4 ಗಂಟೆಗೆ ನಾಗಪುರದ ಸಂವಿಧಾನ ಚೌಕದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಿಗದಿತ ಬೃಹತ್ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಜೆಪಿ ಸ್ಪಷ್ಟಪಡಿಸಿದೆ.
ಜೈಪುರದ ಶಹೀದ್ ಸ್ಮಾರಕದಲ್ಲಿ ದೇಶದ ನಿರುದ್ಯೋಗ ಮತ್ತು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಬೃಹತ್ ರ‍್ಯಾಲಿಯಲ್ಲಿ ದಿಪ್ಕೆ ಅವರ ಮೇಲೆ ಹಲ್ಲೆ ನಡೆದಿತ್ತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ದಾಳಿ ನಡೆಸಿದ ಐವರನ್ನು ಬಂಧಿಸಿದ್ದು, ಅವರ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳು ಆರ್‌ಎಸ್‌ಎಸ್ ಒಡನಾಟವನ್ನು ತೋರಿಸುತ್ತಿವೆ ಎಂದು ವರದಿಗಳು ತಿಳಿಸಿವೆ.








