ಹಾವೇರಿ : ಕಾರಡಗಿಯ ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಮಾರು 8 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆ ಆಸ್ಪತ್ರೆ, ಓಟಿ ಸೇರಿದಂತೆ ಹಲವು ಸೌಕರ್ಯಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸವಣೂರು ತಾಲ್ಲೂಕಿನ ಕಾರಡಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಯಾತ್ರಿನಿವಾಸ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕಾರಡಗಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಶಿಗ್ಗಾಂವಿ ಹುಲಗೂರು ಮತ್ತು ಸವಣೂರಿನಲ್ಲಿ ಕಾರಡಗಿ
ಪಿಹೆಚ್ ಸಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಕಾರಡಗಿ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಸುಮಾರು ವಾಲ್ಮೀಕಿ ಭವನ, ರಸ್ತೆ, ಅಂಗನವಾಡಿ, ಶಾಲೆ, ಸಭಾ ಭವನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.

ಕಾರಡಗಿ ಕ್ಷೇತ್ರದಲ್ಲಿ 3 ಕೋಟಿ ರೂ. ವೆಚ್ಚದ ಯಾತ್ರಿನಿವಾಸ

ಕಾರಡಗಿ ಶ್ರೀ ಕ್ಷೇತ್ರ ಈ ಭಾಗದ ಪವಿತ್ರ ಕ್ಷೇತ್ರವಾಗಿದ್ದು, ಶಕ್ತಿಯ ಕೇಂದ್ರವಾಗಿದೆ. ಸುತ್ತಮುತ್ತಲಿನ ತಾಲ್ಲೂಕುಗಳ ಜೊತೆಗೆ ಬೆಳಗಾವಿ, ದಾವಣಗೆರೆ, ಶಿವಮೊಗ್ಗದಲ್ಲಿ ಈ ಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸುತ್ತಾರೆ.ವೀರಭದ್ರೇಶ್ವರ ಹಾಗೂ ಈಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಉತ್ತಮ ರೀಯಲ್ಲಿ ಆಗಿದೆ. ಇಲ್ಲಿ ನಾನು ಶಾಸಕನಾಗಿದ್ದಾಗ ಪ್ರಸಾದ ನಿಲಯವನ್ನು ನಿರ್ಮಿಸಿದ್ದೇನೆ. ಈಗ 4 ಡಾರ್ಮೆಟ್ರಿ ಮತ್ತು ಕೊಠಡಿಗಳಿರುವ ಯಾತ್ರಿನಿವಾಸವನ್ನು 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. ಹೆಚ್ಚುವರಿಯಾಗಿ 1.50 ಕೋಟಿ ರೂ. ಮಂಜೂರು ಮಾಡಿ, ಶ್ರೀಕ್ಷೇತ್ರದಲ್ಲಿ ಸುಸಜ್ಜಿತವಾದ ಯಾತ್ರಿನಿವಾಸ ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಲ್ಲಿನ ಮೂಲಭೂತ ಸೌಕರ್ಯಗಳಿಗೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕ್ಷೇತ್ರದಲ್ಲಿ ಸಭಾ ಭವನದ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರು ಮಾಡಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿ ಇಲ್ಲಿನ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಸರ್ಕಾರ ಈ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರಗಡಿಯಲ್ಲಿ 834 ಮನೆಗಳನ್ನು ಮಂಜೂರಾಗಿದ್ದು, ಹೊಸದಾಗಿ 200 ಮನೆಗಳನ್ನು ಮಂಜೂರು ಮಾಡಲಾಗಿದೆ. ಎಂದರು.

ಕಾರಡಗಿ ಕ್ಷೇತ್ರದ ಅಭಿವೃದ್ಧಿ ಕೆಲಸ ನಿಷ್ಠೆಯಿಂದ ಮಾಡಬೇಕು

ಇಲ್ಲಿಗೆ ಬರುವವರಿಗೆ ದಾಸೋಹ ದೊಡ್ಡ ಮಟ್ಟದಲ್ಲಿ ಆಗಬೇಕು. ದಾಸೋಹ ಸಮಿತಿಗೆ ಭಕ್ತರಿಂದಲೇ ದೇಣಿಗೆ ಸಂಗ್ರಹ ಮಾಡಿ, ಇಲ್ಲಿಗೆ ಬರುವ ಭಕ್ತರಿಗೆ ಪ್ರತಿದಿನ ಪ್ರಸಾದ ನೀಡುವ ವ್ಯವಸ್ಥೆಯನ್ನು ಮಾಡಬೇಕು. ಕಾರಡಗಿ ಮತ್ತು ನನಗೆ ಅನ್ಯೋನ್ಯ ಸಂಬಂಧ. ಕಾರಡಗಿ ದೇವರ ದೊಡ್ಡ ಆಶೀರ್ವಾದ ನನ್ನ ಮೇಲಿದೆ. ಕಾರಡಗಿ ಈರಣ್ಣನ ದುಡ್ಡನ್ನು ದುರ್ಬಳಕೆ ಮಾಡಬಾರದು. ಭಕ್ತಿಪೂರ್ವಕವಾಗಿ, ಪ್ರಾಮಾಣಿಕವಾಗಿ ದೇವರ ಸೇವೆ ಮಾಡಬೇಕು. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯಂತ ನಿಷ್ಟೆಯಿಂದ ಆಗಬೇಕು ಎಂದರು.

ಸ್ವಯಂ ಉದ್ಯೋಗ ಯೋಜನೆ

ರೈತರ ಮಕ್ಕಳಿಗೆ 12 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ನೀಡಲಾಗಿದೆ. ರೈತ ಕೂಲಿಕಾರ್ಮಿಕರನ್ನು ಗುರುತಿಸಿ ಅವರ ಮಕ್ಕಳಿಗೆ, ನೇಕಾರರಿಗೆ ಸೇರಿದಂತೆ ಹಲವು ಕಸುಬುದಾರರಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಬಡಿಗರು, ಕುಂಬಾರರು ಸೇರಿದಂತೆ ಸುಮಾರು 20 ವಿಧದ ಕಸುಬುದಾರರು ತಮ್ಮ ವೃತ್ತಿಯಲ್ಲಿ ಏಳಿಗೆಯನ್ನು ಕಂಡುಕೊಳ್ಳಲು 50 ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ನೀಡಲಾಗುವುದು. 20 ಲಕ್ಷ ರೈತರಿಗೆ ಸಾಲ ಕೊಡುವ ಯೋಜನೆ, ಯಶಸ್ವಿನಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಹಾಲು ಉತ್ಪಾದಕರಿಗೆ ಕ್ಷೀರ ಅಭಿವೃದ್ಧಿ ಬ್ಯಾಂಕ್, ರೈತ ಶಕ್ತಿ ಡೀಸೆಲ್ ಯೋಜನೆಯನ್ನು ಮುಂದಿನ ತಿಂಗಳಿನಿಂದ ಪ್ರಾರಂಭಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯ ಮೂಲಕ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ, ಸ್ತ್ರೀ ಸಾಮರ್ಥ್ಯ ಯೋಜನೆಯ ಮೂಲಕ 5 ಲಕ್ಷ ಆರ್ಥಿಕ ಸಹಾಯ ನೀಡಿ ಸ್ವಯಂ ಉದ್ಯೋಗ, ಹೀಗೆ ದುಡಿಯುವ ವರ್ಗಕ್ಕೆ ಆರ್ಥಿಕ ಸಬಲೀಕರಣಗೊಳಿಸಲಾಗುವುದು. ಗ್ರಾಮಗಳ ಮೂಲಭೂತ ಸೌಕರ್ಯ ವೃದ್ಧಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ 8 ಸಾವಿರ ಶಾಲಾಕೊಠಡಿಗಳ ನಿರ್ಮಾಣ

ಇಡೀ ರಾಜ್ಯದಲ್ಲಿ 8 ಸಾವಿರ ಶಾಲಾಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಈ ರೀತಿ 3 ವರ್ಷ ಕಟ್ಟಿದರೆ ರಾಜ್ಯದಲ್ಲಿ ಶಾಲಾ ಕೊಠಡಿಗಳ ಅಭಾವವಿರುವುದಿಲ್ಲ. ಮುಂದಿನ ಆಗಸ್ಟ್ 15 ರೊಳಗೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತಿದೆ. 4000 ಹೊಸ ಅಂಗನವಾಡಿಗಳ ನಿರ್ಮಾಣ, 100 ಆಸ್ಪತ್ರೆಗಳ ಮೇಲ್ದರ್ಜೀಕರಣ, ಡಯಾಲಿಸಿಸ್ ಸೈಕಲ್ಸ್ ಹೆಚ್ಚಳ, ಕಣ್ಣು ಚಿಕಿತ್ಸೆ, ಶ್ರವಣ ಸಾಧನ ಪೂರೈಕೆ ಮಾಡಲಾಗುತ್ತಿದೆ.ಹೀಗೆ ಸರ್ಕಾರ ಜನಸ್ಪಂದನೆಯ ಕೆಲಸವನ್ನು ಮಾಡಲಾಗುತ್ತಿದೆ. ಫೆಬ್ರವರಿಯಲ್ಲಿ ಬಜೆಟ್ ಮಂಡಿಸಲಾಗುತ್ತಿದ್ದು, ಬಡವರ ಪರ ಕಾರ್ಯಕ್ರಮಗಳನ್ನು ಇನಷ್ಟು ರೂಪಿಸಲಾಗುವುದು ಎಂದು ತಿಳಿಸಿದರು.

ವಿಕಲಚೇತನರಿಗೆ ಮಹತ್ವದ ಮಾಹಿತಿ: ಬಿಎಂಟಿಸಿ ಬಸ್ ಪಾಸ್ ಗೆ ಅರ್ಜಿ ಆಹ್ವಾನ, ಹಳೆಯ ಪಾಸ್ ಅವಧಿಯೂ ವಿಸ್ತರಣೆ

ಭಾರತ್‌ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಸೂಪರ್ ಸ್ಟಾರ್ ಕಮಲ್ ಹಾಸನ್ | Bharat Jodo Yatra

ಜೆಡಿಎಸ್ ಅಧಿಕಾರಕ್ಕೆ ಬಂದರೇ 100 ದಿನದಲ್ಲಿ ಎನ್ ಪಿಎಸ್ ರದ್ದು – ಸಿ.ಎಂ ಇಬ್ರಾಹಿಂ | JDS Party

Share.
Exit mobile version