ಬಳ್ಳಾರಿ : ಈ ವರ್ಷ ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ಅನುದಾನ ಮೀಸಲಿರಿಸಿದ್ದು, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾವು ಗ್ಯಾರಂಟಿಗಳಿಗೆ ರೂ.60,000 ಕೋಟಿ ಈ ವರ್ಷ ಒದಗಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕೋ? ಬೇಡವೋ? BJP Karnataka ನಾಯಕರು ಗ್ಯಾರಂಟಿಗಳನ್ನು ರದ್ದು ಮಾಡಲು ಹೇಳಲಿ. ಹೇಳುತ್ತಾರೆಯೇ? ಬರೀ ಟೀಕಿಸುವುದು ಮಾತ್ರ ಅವರಿಗೆ ಗೊತ್ತು ಎಂದರು.
ಕಚ್ಛಾತೈಲದ ಬೆಲೆ ಕಡಿಮೆಯಾಗಿದ್ದರೆ, ಮತ್ತೊಂದೆಡೆ ಪೆಟ್ರೋಲ್ ಬೆಲೆ ಹೆಚ್ಚು ಮಾಡಲಾಗಿದೆ. ಮನಮೋಹನ್ ಸಿಂಗ್ ಅವರು ಇದ್ದಾಗ 103 ಕಚ್ಛಾತೈಲದ ಬೆಲೆ ಡಾಲರ್ ಬೆಲೆ ಇದ್ದಾಗ ಸಹಾಯಧನವನ್ನೂ ನೀಡಿ ಪೆಟ್ರೋಲ್ ಬೆಲೆಯನ್ನೂ ಇಳಿಸಿದ್ದರು. ನರೇಂದ್ರ ಮೋದಿಯವರ ಕಾಲದಲ್ಲಿ ಹೆಚ್ಚಾಗಿದೆ, ಯಾಕೆ? ನಾವು ಬೆಲೆಏರಿಕೆ ಮಾಡಿರುವುದು ಅಭಿವೃದ್ಧಿಗಾಗಿ. ಡೀಸಲ್ ಪೆಟ್ರೋಲ್ ಮೇಲೆ 3. ರೂ ಹೆಚ್ಚು ಮಾಡಿದರೂ ನೆರೆಯ ರಾಜ್ಯಗಳಿಗಿಂತಲೂ ನಮ್ಮಲ್ಲಿ ಬೆಲೆ ಕಡಿಮೆ ಇದೆ ಎಂದು ಹೇಳಿದರು.
16ನೇ ಹಣಕಾಸು ಆಯೋಗ ಕೆಲಸ ಪ್ರಾರಂಭ ಮಾಡಿದೆ. ಆಯೋಗವು ಕೇಂದ್ರಕ್ಕೆ ಹಾಗೂ ನಮಗೆಷ್ಟು ಬರಬೇಕೆಂದು ಹಂಚಿಕೆ ಮಾಡುತ್ತದೆ. 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದಿಂದ ನಮಗೆ ಅನ್ಯಾಯವಾಗಿದೆ. ನಮಗೆ 1 ಲಕ್ಷ 87 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ತೆರಿಗೆ ಹಂಚಿಕೆ ಹಾಗೂ ತೆರಿಗೆ ಹಂಚಿಕೆಯಾಗುವ ವ್ಯಾಪ್ತಿ ಕೂಡ ಕಡಿಮೆಯಾಯಿತು. ಸೆಸ್ ಹಾಗೂ ಸರ್ಚಾಜ್ ಹೆಚ್ಚು ವಸೂಲು ಮಾಡಲು ಪ್ರಾರಂಭಿಸಿದರು. ಸೆಸ್ ಹಾಗೂ ಸರ್ಚಾಜ್ ನಲ್ಲಿ ನಮಗೆ ಪಾಲು ಬರುವುದಿಲ್ಲ. ಕೇಂದ್ರವೇ ಇಟ್ಟುಕೊಳ್ಳುತ್ತದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಪ್ರಾರಂಭಕ್ಕೆ ಅಂಗನವಾಡಿ ಕಾರ್ಯಕರ್ತೆಯರು ವಿರೋಧ ವ್ಯಕ್ತಪಡಿಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.