ಬೆಂಗಳೂರು: ರಾಜ್ಯದಲ್ಲಿ ಹೊಸ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಹಾಗೂ ಹಾಲಿ ಕೈಗಾರಿಕಾ ಪ್ರದೇಶಗಳಿಗೆ ನದಿ ಮೂಲದ ಪ್ರತ್ಯೇಕ ನೀರು ಸರಬರಾಜು ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಸಲುವಾಗಿ ₹5,000 ಕೋಟಿ ಸಾಲ ಪಡೆಯುವ ಉದ್ದೇಶ ಇದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಗುರುವಾರ ಇಲ್ಲಿ ಹೇಳಿದರು.
ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಇಲ್ಲಿ ಏರ್ಪಡಿಸಿರುವ ‘ಇನ್ನೋವರ್ಜ್’ ಸಮಾವೇಶದಲ್ಲಿ ಅವರು ಗುರುವಾರ ಮಾತನಾಡಿದರು.
ರಾಜ್ಯದ ಬಹುತೇಕ ಕೈಗಾರಿಕಾ ಪ್ರದೇಶಗಳಲ್ಲಿ ನಿರೀಕ್ಷಿತ ಮೂಲಸೌಕರ್ಯ ಇಲ್ಲ. ಅದರಲ್ಲೂ ಪ್ರತ್ಯೇಕ ನೀರು ಸರಬರಾಜು ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಈ ಸಂಬಂಧ ಹಣಕಾಸು ಇಲಾಖೆ ಜತೆಗೂ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಉದ್ದೇಶಿತ ನೀರು ಸರಬರಾಜು ಯೋಜನೆಗೆ ಅಂದಾಜು ಎರಡು ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಉಳಿದ ಮೂರು ಸಾವಿರ ಕೋಟಿಯನ್ನು ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದಕ್ಜೆ ಹಾಗೂ ಹೊಸ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮತ್ತು ಭೂಸ್ವಾಧೀನಕ್ಕೆ ಬಳಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು, ಬೆಳಗಾವಿಯಲ್ಲಿ ಸ್ಟಾರ್ಟಪ್ ಪಾರ್ಕ್
ರಾಜ್ಯವು ಉದ್ಯಮ, ಸಂಶೋಧನೆ, ಅಭಿವೃದ್ಧಿ ಮತ್ತು ತಂತ್ರಜ್ಞಾನಗಳ ಪರವಾಗಿದ್ದು, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಎರಡು ಪ್ರತ್ಯೇಕ ಸ್ಟಾರ್ಟಪ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಸಚಿವ ಪಾಟೀಲ ಹೇಳಿದ್ದಾರೆ.
ಸ್ಟಾರ್ಟಪ್ ಪಾರ್ಕಿಗೆ ಬೇಕಾಗುವ ಭೂಮಿಯನ್ನು ಬೆಂಗಳೂರಿನಲ್ಲಿ ಈಗಾಗಲೇ ಗುರುತಿಸಲಾಗಿದೆ. ಬೆಳಗಾವಿಯಲ್ಲಿ ಸೂಕ್ತ ಜಾಗವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಲ್ಲಿ ಮೆಡ್-ಟೆಕ್ ಸ್ಟಾರ್ಟಪ್ ಪಾರ್ಕ್ ಸ್ಥಾಪಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.
ಕರ್ನಾಟಕವು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯ ತಾಣವಾಗಿದೆ. ಇದರ ಜತೆಗೆ ನಾವು ಕೌಶಲಪೂರ್ಣ ಮಾನವ ಸಂಪನ್ಮೂಲವನ್ನು ಕೂಡ ಸೃಷ್ಟಿಸಬೇಕು. ಆಗ ಇದರ ಲಾಭ ರಾಜ್ಯಕ್ಕೆ ಸಿಗುತ್ತದೆ ಎಂದು ಅವರು ವಿವರಿಸಿದ್ದಾರೆ.
ತಯಾರಿಕಾ ವಲಯದಲ್ಲಿ ಸೂಕ್ತ ನೀತಿಗಳು ಮತ್ತು ಪ್ರೋತ್ಸಾಹದೊಂದಿಗೆ ರಾಜ್ಯವು ಭಾರೀ ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತಿದೆ. ನಾಲ್ಕನೆಯ ಕೈಗಾರಿಕಾ ಕ್ರಾಂತಿಯನ್ನು ಪರಿಣಾಮಕಾರಿಯಾಗಿ ಸಾಧಿಸಬೇಕು ಎನ್ನುವುದು ರಾಜ್ಯದ ಗುರಿಯಾಗಿದೆ ಎಂದು ಪಾಟೀಲ ನುಡಿದರು.
ಬಳಿಕ ಸಚಿವರು ಉದ್ಯಮಿಗಳ ಜತೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಸಿಐಐ ಕರ್ನಾಟಕ ಘಟಕದ ಅಧ್ಯಕ್ಷ ಎನ್ ವೇಣು ಸ್ವಾಗತಿಸಿದರು. ಸಿಐಐ ಇಂಡಿಯಾ ಅಧ್ಯಕ್ಷರೂ ಆದ ವೊಲ್ವೊ ಅಧ್ಯಕ್ಷ ಕಮಲ್ ಬಾಲಿ, ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ಮಾತನಾಡಿದರು. ಸಿಐಐ ಉಪಾಧ್ಯಕ್ಷ ರಬೀಂದ್ರ ಶ್ರೀಕಂಠನ್ ವಂದಿಸಿದರು.
BREAKING: ‘ಫ್ರೆಂಚ್’ ನೂತನ ಪ್ರಧಾನಿಯಾಗಿ ‘ಮೈಕೆಲ್ ಬಾರ್ನಿಯರ್’ ನೇಮಕ | Michel Barnier
ಬೆಂಗಳೂರು ಜನತೆ ಗಮನಕ್ಕೆ: ಈ ಮಾರ್ಗದಲ್ಲಿ ಹೊಸದಾಗಿ BMTC ಬಸ್ ಸಂಚಾರ ಆರಂಭ | BMTC Bus Service
ಕೇರಳದ ‘ಹೇಮಾ’ ಸಮಿತಿ ಮಾದರಿ ಸಮಿತಿ ರಚಿಸಿ : ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ ‘ಫೈರ್’