ಚಾಮರಾಜನಗರ : ರಾಜ್ಯ ಕಾಂಗ್ರೆಸ್ ಸರ್ಕಾರವು ಎಂಟೇ ತಿಂಗಳಲ್ಲಿ ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ. 36,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜನರ ಖಾತೆಗೆ ನೇರವಾಗಿ ಜಮೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಭರವಸೆಗಳನ್ನು ಈಡೇರಿಸಿದ್ದೇವೆ. ಎಂಟೇ ತಿಂಗಳಲ್ಲಿ ಐದೂ ಗ್ಯಾರಂಟಿ ಜಾರಿ ಮಾಡಿದ್ದೇವೆ. 36,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಜನರ ಖಾತೆಗೆ ನೇರವಾಗಿ ಜಮೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಅಧಿಕಾರ ಮತ್ತು ಸಂಪತ್ತು ಸಮಾಜದ ಎಲ್ಲರಲ್ಲೂ ಹಂಚಿಕೆಯಾಗಬೇಕು ಎನ್ನುವುದು ಸಂವಿಧಾನದ ಆಶಯ. ಸಂವಿಧಾನದ ಆಶಯಗಳಿಗೆ ತಕ್ಕಂತೆ ಕಾಂಗ್ರೆಸ್ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ, ಗ್ಯಾರಂಟಿಗಳನ್ನು ಕೊಟ್ಟಿದೆ. ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸಿದ ಏಕೈಕ ಸರ್ಕಾರ ನಮ್ಮದು ಎಂದರು.
ನಮ್ಮ ಐದು ಗ್ಯಾರಂಟಿಗಳಿಗೆ ನಾಲ್ಕೂವರೆ ಕೋಟಿ ಜನರು ಫಲಾನುಭವಿಗಳಾಗಿದ್ದಾರೆ. ರಾಜ್ಯದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 45 ಸಾವಿರದಿಂದ 50 ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಇದನ್ನು ಬಿಜೆಪಿ ಯಾಕೆ ವಿರೋಧಿಸುತ್ತಿದೆ? ನಾಡಿನ ಜನರಿಗೆ ಸರ್ಕಾರದ ಸವಲತ್ತುಗಳು ಸಿಗಬಾರದಾ?
1.20 ಕೋಟಿ ಕುಟುಂಬಗಳ, 4.50 ಕೋಟಿ ಜನಕ್ಕೆ ಈ ವರ್ಷ ₹36,000 ಕೋಟಿ ಕೊಟ್ಟಿದ್ದೇವೆ. ಮುಂದಿನ ವರ್ಷಕ್ಕೆ ಗ್ಯಾರಂಟಿಗಳಿಗೆ ₹59,000 ಕೋಟಿ ಕೊಟ್ಟಿದ್ದೇವೆ. ರಾಜ್ಯದ ಜನರ ಅಭಿವೃದ್ಧಿ ಕಾರ್ಯಗಳಿಗೆ 1.20 ಲಕ್ಷ ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದೇವೆ ಎಂದು ಹೇಳಿದ್ದಾರೆ.
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಮೂಢನಂಬಿಕೆ ಜಿಲ್ಲೆಯ ಜನರಿಗೆ ಮಾಡುವ ಅವಮಾನ. ನಾನು ಚಾಮರಾಜನಗರಕ್ಕೆ ಬಂದಷ್ಟೂ ನನ್ನ ಕುರ್ಚಿ ಗಟ್ಟಿ ಆಗುತ್ತಿದೆ. ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿರುವ ಮನುವಾದಿಗಳು ಮತ್ತು ಮನುವಾದ ನಮ್ಮ ನಿಮ್ಮೆಲ್ಲರ ಶತ್ರು. ಸಂವಿಧಾನ ಬದಲಾಯಿಸಲು ಅವಕಾಶ ಆಗದಂತೆ ಅವರನ್ನು ಹೀನಾಯವಾಗಿ ಸೋಲಿಸಿ ಎಂದು ಕರೆ ಕೊಟ್ಟಿದ್ದಾರೆ.