ಕೋಲ್ಕತ್ತಾ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣದ ಏಕೈಕ ಅಪರಾಧಿ ಸಂಜಯ್ ರಾಯ್‌ನನ್ನು ಮತ್ತೊಮ್ಮೆ ವಿಚಾರಣೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (CBI) ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ.
‘ಆತನ ಬಳಿ ಹೆಚ್ಚಿನ ಮಾಹಿತಿ ಇರಬಹುದು’
ನ್ಯಾಯಮೂರ್ತಿ ರಾಜಶೇಖರ್ ಮಂಥಾ ಮತ್ತು ನ್ಯಾಯಮೂರ್ತಿ ರೈ ಚಟ್ಟೋಪಾಧ್ಯಾಯ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ. “ಅಪರಾಧಿ ಸಂಜಯ್ ರಾಯ್ ಬಳಿ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿ ಇರುವ ಸಾಧ್ಯತೆಯಿದೆ. ತನಿಖೆಯ ಹಿತದೃಷ್ಟಿಯಿಂದ ಆತನನ್ನು ಪುನಃ ಪ್ರಶ್ನಿಸಲು ಸಿಬಿಐ ಹಿಂಜರಿಯಬಾರದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಹೆಚ್ಚುವರಿ ಅಫಿಡವಿಟ್‌ಗಳ ಆಧಾರದ ಮೇಲೆ ಈ ಆದೇಶ ಹೊರಬಿದ್ದಿದೆ. ಈ ಘಟನೆಯಲ್ಲಿ ಸಂಜಯ್ ರಾಯ್ ಒಬ್ಬನೇ ಅಲ್ಲದೆ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯಿದೆ ಮತ್ತು ಇದು ‘ಗ್ಯಾಂಗ್‌ರೇಪ್’ ಆಗಿರಬಹುದು ಎಂದು ಪೋಷಕರ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ವಿಧಿವಿಜ್ಞಾನ ತಜ್ಞರ ಅಭಿಪ್ರಾಯ ಮತ್ತು ಲಭ್ಯವಿರುವ ಆಡಿಯೋ ಪುರಾವೆಗಳನ್ನು ಸರಿಯಾಗಿ ಪರಿಶೀಲಿಸಿಲ್ಲ ಎಂಬುದು ಅವರ ಆರೋಪವಾಗಿದೆ.








