ಉತ್ತರ ಕನ್ನಡ: ಜಿಲ್ಲೆಯಲ್ಲಿ ಅಕ್ರಮವಾಗಿ ಮರ ಕಡಿತಲೆ ಮಾಡಿದರೂ, ನಾಮಕಾವಸ್ಥೆಗೆ ಪರಿಶೀಲನೆ ಮಾಡಿ, ಪ್ರಕರಣ ಮುಚ್ಚಿ ಹಾಕಿರುವಂತ ಆರೋಪವು ಕ್ಯಾದಗಿಯ RFO ಹಾಗೂ ವಾಚರ್ ಉದಯ ನಾಯ್ಕ್ ವಿರುದ್ಧ ಕೇಳಿ ಬಂದಿದೆ. ಮೂಗರ್ಜಿಯನ್ನು ಗಂಭೀರವಾಗಿ ಪರಿಗಣಿಸದಂತ ಅರಣ್ಯ ಇಲಾಖೆಯು, ವಾಚರ್, ಮರ ಕಡಿತಲೆ ಮಾಡಿದವರಿಗೆ ಬೆಂಬಲವಾಗಿ ನಿಂತಿರುವುದಾಗಿ ಹೇಳಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಕ್ಯಾದಗಿ ವಲಯ ಅರಣ್ಯಾಧಿಕಾರಿಗಳ ಸಮೀಪದ ಗ್ರಾಮವಾಗಿರುವಂತ ಹೊನ್ನೆಬಿಡಾರದಲ್ಲಿ ಬೃಹತ್ ಗಾತ್ರದ ಮರಗಳನ್ನು ಕಟ್ಟಿಂಗ್ ಮಿಷಿನ್ ಬಳಸಿ ಬಾಬು ನಾಯ್ಕ್ ಎಂಬುವರು ಕಡಿತಲೆ ಮಾಡಿದಂತ ಆರೋಪ ಕೇಳಿ ಬಂದಿದೆ. ಖುದ್ದು ಮರ ಕಡಿತಲೆ ಮಾಡೋದಕ್ಕೆ ಆ ಭಾಗದ ವಾಚರ್ ಉದಯ ನಾಯ್ಕ್ ಎಂಬಾತ ಸಾಥ್ ನೀಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ RFOಗೆ ಸಾರ್ವಜನಿಕರೊಬ್ಬರು ಮೂಗರ್ಜಿ ಬರೆದಿದ್ದಾರೆ. ಅದನ್ನು ಗೌಪ್ಯವಾಗಿಟ್ಟು ಸ್ಥಳಕ್ಕೆ ತೆರಳಿ ಲಕ್ಷಾಂತರ ಬೆಲೆ ಬಾಳುವಂತ ಕಡಿತಲೆ ಮಾಡಿದಂತ ಮರಗಳನ್ನು ವಶಕ್ಕೆ ಪಡೆಯೋದು ಬಿಟ್ಟು, ವಾಚರ್ ಉದಯ ನಾಯ್ಕ್ ಗೆ ದೂರು ಅರ್ಜಿಯ ವಿಷಯವನ್ನೇ ತಿಳಿಸಿದ್ದಾರೆ. ಜೊತೆಗೆ ತಾನು ಪರಿಶೀಲನೆಗೆ ಬರುವುದಾಗಿ, ಆ ವೇಳೆಗೆ ಮರಗಳನ್ನು ಸಾಗಿಸುವಂತೆಯೂ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕ್ಯಾದಗಿ ಆರ್ ಎಫ್ ಓ ಹೊನ್ನೆಬಿಡಾರ ಗ್ರಾಮಕ್ಕೆ ತೆರಳಿದಾಗ ಕಡಿತಲೆ ಮಾಡಿದಂತ ಮರಗಳೇ ಸಿಕ್ಕಲ್ಲ. ಕಾಟಾಚಾರಕ್ಕೆ ಪರಿಶೀಲಿಸಿ, ಮರ ಕಡಿತಲೆಯ ತುಂಡುಗಳು ಸಿಕ್ಕಿಲ್ಲ ಎಂಬುದಾಗಿ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾಗಿ ಹೇಳಲಾಗುತ್ತಿದೆ.
ಇನ್ನೂ ಆರ್ ಎಫ್ ಒ ಅವರೇ ಮರ ಕಡಿತಲೆ ಮಾಡಿದವರಿಗೆ ಬೆಂಬಲಿಸಿದ್ದರಿಂದ ಗ್ರಾಮಸ್ಥರು ದೂರು ಅರ್ಜಿಯನ್ನು ಶಿರಸಿ ಡಿಎಫ್ಓ, ಆ ಬಳಿಕ ಉತ್ತರ ಕನ್ನಡ ಸಿಸಿಎಫ್ ಹಾಗೂ ಬೆಂಗಳೂರಿನ ಅರಣ್ಯ ಭವನದಲ್ಲಿನ ಮುಖ್ಯ ಅರಣ್ಯಾಧಿಕಾರಿಗಳಿಗೂ ಪತ್ರವನ್ನು ಗ್ರಾಮಸ್ಥರೊಬ್ಬರು ಬರೆದಿರೋದಾಗಿ ತಿಳಿದು ಬಂದಿದೆ. ಇಷ್ಟೆಲ್ಲ ಮೂಗರ್ಜಿಗಳು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹೋದ್ರೂ, ಈವರೆಗೆ ಮರ ಕಡಿತಲೆ ಮಾಡಿದಂತ ಬಾಬು ನಾಯ್ಕ್, ವಾಚರ್ ಉದಯ ನಾಯ್ಕ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಂದಹಾಗೇ ಹೊನ್ನೆಬಿಡಾರ ಗ್ರಾಮದಲ್ಲಿ ಇಡೀ ಊರಿಗೆ ಕೇಳುವಂತೆ ಮಿಶಿನ್ ಬಳಸಿ ಜಂಗಲ್ ಮರವನ್ನು ಕಡಿತಲೆ ಮಾಡಲಾಗಿದೆ. ಹೀಗೆ ಕಡಿತಲೆ ಮಾಡಿದಂತ ಮರವನ್ನು ತುಂಡರಿಸಿ ಬೇರೆಡೆಗೆ ಸಾಗಿಸಿದರೂ, ಅದರ ಬುಡ ಕಡಿತಲೆ ಮಾಡಿದಲ್ಲೇ ಇದ್ದರೂ ಮರ ಕಡಿತಲೆ ಮಾಡಿದವರ ವಿರುದ್ಧ ಅರಣ್ಯ ಇಲಾಖೆ ಕ್ರಮ ಏಕಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ಕೂಡಲೇ ಮರ ಕಡಿತಲೆಗೆ ಅವಕಾಶ ಮಾಡಿಕೊಟ್ಟ ವಾಚರ್ ಉದಯ ನಾಯ್ಕ್, ಮರ ಕಡಿದಂತ ಬಾಬು ನಾಯ್ಕ್ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು ಎಂಬುದು ಹೊನ್ನೆಬಿಡಾರ ಗ್ರಾಮಸ್ಥರ ಒತ್ತಾಯವಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು








