ಬೆಂಗಳೂರು: ಅಡಕೆಯು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಸಂಶೋಧನಾ ವರದಿ ತಿಳಿಸಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ವಿಧಾನ ಪರಿಷತ್ನಲ್ಲಿ ಮಾಹಿತಿ ನೀಡಿದ್ದಾರೆ.
ಪಾನ್ ಅಥವಾ ಪಾನ್ ಮಸಾಲದಂತಹ ಪದಾರ್ಥಗಳಲ್ಲಿ ಅಡಕೆಯನ್ನು ಒಂದು ಅಂಶವಾಗಿ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹಾಗೂ ತಂಬಾಕು ಸೇರಿಸದೇ ಇದ್ದರೆ ಅದು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ವರದಿ ಹೇಳಿದೆ.ಕೇರಳದ ಸಂಸ್ಥೆಯೊಂದು ನೀಡಿರುವ ಮಧ್ಯಂತರ ವರದಿಯ ಪ್ರಕಾರ, ಅಡಕೆ ತಟ್ಟೆಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಅತ್ಯಂತ ಕಡಿಮೆ ಅಪಾಯವಿದೆ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಕ್ಯಾನ್ಸರ್ ಕಾರಕವಲ್ಲ: ಅಡಕೆ ಕ್ಯಾನ್ಸರ್ ಕಾರಕವಲ್ಲ ಎಂಬುದು ಅಂತಿಮ ವರದಿಯಲ್ಲಿ ಸಾಬೀತಾದ ನಂತರ, ಸರ್ಕಾರದ ವತಿಯಿಂದಲೇ ಈ ಬಗ್ಗೆ ಅಗತ್ಯ ಪ್ರಚಾರ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ತೋಟಗಾರಿಕೆ ಸಚಿವ ಎಸ್. ಮಲ್ಲಿಕಾರ್ಜುನ್ ಪರವಾಗಿ ಉತ್ತರಿಸಿದ ಚಲುವರಾಯಸ್ವಾಮಿ ಅವರು, ಅಡಕೆಗೆ ಅಂಟಿರುವ ಕಳಂಕವನ್ನು ತೊಡೆದುಹಾಕಲು ‘ಅಡಕೆ ಬಳಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು’ ಎಂಬ ಕುರಿತು ಬೆಂಗಳೂರಿನ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯಕ್ಕೆ ಸಂಶೋಧನೆಯ ಜವಾಬ್ದಾರಿ ನೀಡಲಾಗಿತ್ತು. ಸುಮಾರು 31 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಂಶೋಧನೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.








