ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ನುಸುಳುವಿಕೆ ಮತ್ತು ಕಳ್ಳಸಾಗಣೆಯನ್ನು ತಡೆಯಲು ಗಡಿ ಭದ್ರತಾ ಪಡೆ (BSF) ಅತ್ಯಂತ ವಿಭಿನ್ನ ಹಾಗೂ ನವೀನ ಹಾದಿಯನ್ನು ತುಳಿಯಲು ನಿರ್ಧರಿಸಿದೆ. ಗಡಿಯಲ್ಲಿ ಬೇಲಿ ಹಾಕಲು ಅಸಾಧ್ಯವಾಗಿರುವ ನದಿ ಮತ್ತು ಜೌಗು ಪ್ರದೇಶಗಳಲ್ಲಿ ಶತ್ರುಗಳ ಮೇಲೆ ನಿಗಾ ಇಡಲು ಮತ್ತು ಭಯ ಹುಟ್ಟಿಸಲು ಹಾವು ಹಾಗೂ ಮೊಸಳೆಗಳನ್ನು ಬಳಸಿಕೊಳ್ಳುವ ಸಾಧ್ಯತೆಯನ್ನು ಬಿಎಸ್ಎಫ್ ಪರಿಶೀಲಿಸುತ್ತಿದೆ.
4,096 ಕಿ.ಮೀ ಉದ್ದದ ಭಾರತ-ಬಾಂಗ್ಲಾ ಗಡಿಯಲ್ಲಿ ಸುಮಾರು 175 ಕಿ.ಮೀ ನದಿ ಹಾಗೂ ದಟ್ಟವಾದ ಕಾಡುಗಳಿಂದ ಕೂಡಿದೆ. ಇಲ್ಲಿ ತಂತಿ ಬೇಲಿ ನಿರ್ಮಿಸುವುದು ಸವಾಲಿನ ಕೆಲಸ. ಹೀಗಾಗಿ ಅಂತಹ ಪ್ರದೇಶಗಳಲ್ಲಿ ಹಾವು ಮತ್ತು ಮೊಸಳೆಗಳನ್ನು ಬಿಡುವುದರ ಮೂಲಕ ನೈಸರ್ಗಿಕ ತಡೆಗೋಡೆ ನಿರ್ಮಿಸಲು ಯೋಜಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ನೀಡಿದ ಸಲಹೆಯ ಮೇರೆಗೆ ಈ ಹೊಸ ಕ್ರಮದ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.








