ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ದರ್ಶನ್ & ಗ್ಯಾಂಗ್ ನಿಂದ ಬರೋಬ್ಬರಿ 139 ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ಈವರೆಗೆ 28 ಸ್ಥಳಗಳಲ್ಲಿ ಸ್ಥಳ ಮಹಜರು ನಡೆಸಿದ್ದು, ಈ ವೇಳೆ ರೇಣುಕಾಸ್ವಾಮಿ ಹತ್ಯೆಗೆ ಬಳಸಿದ್ದಾರೆ ಎನ್ನಲಾದ ದೊಣ್ಣೆ, ಶವ ಸಾಗಿಸಲು ಬಳಸಿದ್ದ ಕಾರು, ಆರೋಪಿಗಳ ಮೊಬೈಲ್, ಶೂ, ಬಟ್ಟೆ ಸೇರಿದಂತೆ 139 ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಪಾರಾಗಲು ಹಾಗೂ ಇತರೆ ಆರೋಪಿಗಳ ಮೂಲಕ ಸಾಕ್ಷ್ಯನಾಶ ಮಾಡಲು ನಟ ದರ್ಶನ್, ತನ್ನ ಸ್ನೇಹಿತ ಮೋಹನ್‌ರಾಜ್ ಎಂಬವರ ಕಡೆಯಿಂದ 40 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು ಎನ್ನಲಾಗಿದ್ದು, 40 ಲಕ್ಷ ರೂಪಾಯಿ ಪೈಕಿ 37.40 ಲಕ್ಷವನ್ನು ರಾಜರಾಜೇಶ್ವರಿನಗರದಲ್ಲಿರುವ ದರ್ಶನ್ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪತಿ ನೀಡಿದ್ದ 3 ಲಕ್ಷ ರೂ. ಹಾಗೂ ಇತರೆ ವಸ್ತುಗಳನ್ನು ಪ್ರಕರಣದ ತನಿಖಾ ತಂಡಕ್ಕೆ ತಂದುಕೊಟ್ಟಿದ್ದಾರೆ ಎನ್ನಲಾಗಿದೆ.
ಕೊಲೆ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವ ಮುನ್ಸೂಚನೆ ಇತ್ತು. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು, ಬೇರೆಯವರನ್ನು ಠಾಣೆಗೆ ಶರಣು ಮಾಡಿಸಲು ಹಾಗೂ ಸಾಕ್ಷ್ಯ ನಾಶ ಮಾಡಲು ಹಣದ ಅಗತ್ಯವಿತ್ತು. ಸ್ನೇಹಿತ ಮೋಹನ್ ರಾಜ್ ಕಡೆಯಿಂದ 40 ಲಕ್ಷ ಪಡೆದುಕೊಂಡು ಮನೆಯಲ್ಲಿಟ್ಟುಕೊಂಡಿದ್ದೆ ಎಂಬುದಾಗಿ ದರ್ಶನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.