ಬೆಂಗಳೂರು : ವಿಜಯೇಂದ್ರ, ರಾಘವೇಂದ್ರ ಹಾಗೂ ಬಿಜೆಪಿ ಇತರೆ ನಾಯಕರು ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿರುವ ಕೆಲಸದ ಅನುಭವ ಸ್ಮರಿಸುತ್ತಾ, ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ರವಾನೆ ಮಾಡುತ್ತಿರುವುದಾಗಿ ಆರೋಪ ಮಾಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ಗಾಂಧಿ ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಬಿಹಾರ ಚುನಾವಣೆಗೆ ಕರ್ನಾಟಕ ಸರ್ಕಾರ ಹಣ ರವಾನಿಸುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, “ತಮ್ಮ ಕೆಲಸವನ್ನು ಅವರು ಈಗ ಸ್ಮರಿಸುತ್ತಿದ್ದಾರೆ. ನಾವು ಅಂತಹ ಯಾವುದೇ ಕೆಲಸ ಮಾಡಿಲ್ಲ. ಅದರ ಅಭ್ಯಾಸವೂ ಇಲ್ಲ. ಅದರ ಅಗತ್ಯವೂ ಇಲ್ಲ. ಇದು ಕೇವಲ ಹಿಟ್ ಅಂಡ್ ರನ್ ಹೇಳಿಕೆ. ಅವರ ಬಳಿ ಈ ಆರೋಪಕ್ಕೆ ಪೂರಕವಾಗಿ ದಾಖಲೆಗಳಿದ್ದರೆ ತೋರಿಸಲಿ. ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂಬ ಕಾರಣಕ್ಕೆ ಇಂತಹ ಆರೋಪ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಪತನವಾಗಬಹುದು
ನವೆಂಬರ್ ವೇಳೆಗೆ ಸರ್ಕಾರ ಪತನವಾಗಲಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೇಂದ್ರ ಸರ್ಕಾರದಲ್ಲಿ ಏನೋ ಸಮಸ್ಯೆ ಇರಬೇಕು ಹೀಗಾಗಿ ಅವರು ಈ ರೀತಿ ಹೇಳುತ್ತಿದ್ದಾರೆ. ಅವರ ಸರ್ಕಾರ ಪತನವಾಗಬಹುದು, ಕಾಂಗ್ರೆಸ್ ಸರ್ಕಾರವಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ 140 ಶಾಸಕರ ಭಾರಿ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಆದರೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವಿದೆ” ಎಂದು ಹೇಳಿದರು.
ಬೆಂಗಳೂರಿನ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ
ಕಿರಣ್ ಮಜೂಂದಾರ್ ಷಾ ಅವರು ನಿಮ್ಮನ್ನು ಭೇಟಿ ಮಾಡಿದ್ದು ಬೆಂಗಳೂರಿನ ಬಗ್ಗೆ ಚರ್ಚೆ ಮಾಡಲಾಯಿತೇ ಎಂದು ಕೇಳಿದಾಗ, “ಹೌದು ಚರ್ಚೆ ಮಾಡಿದೆವು. ಅವರೆಲ್ಲರೂ ಬೆಂಗಳೂರಿಗೆ ಸಹಕಾರ ನೀಡುತ್ತೇವೆ, ಬೆಂಗಳೂರಿಗೆ ಧಕ್ಕೆ ತರುವುದಿಲ್ಲ ಎಂದು ಹೇಳಿದ್ದಾರೆ. ವ್ಯವಸ್ಥೆ ಜೊತೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರನ್ನು ಕರೆದು ಮಾತನಾಡುತ್ತೇವೆ. ಜಿಬಿಎ ವ್ಯಾಪ್ತಿ ಹೊರತಾಗಿ ಬೆಂಗಳೂರಿನ ಹೊರ ಭಾಗದಲ್ಲಿರುವ ಸ್ಥಳೀಯ ಪಾಲಿಕೆಗಳನ್ನು ನನ್ನ ಇಲಾಖೆಗೆ ಸೇರಿಸಿಕೊಂಡಿದ್ದು, ಬುಧವಾರ ಅಥವಾ ಗುರುವಾರ ಆ ಪ್ರದೇಶಕ್ಕೆ ಭೇಟಿ ನೀಡಿ, ಶುಕ್ರವಾರ ಅವರ ಜೊತೆ ಸಭೆ ಮಾಡುತ್ತೇನೆ. ಆ ಭಾಗದ ತೆರಿಗೆ ಆದಾಯಕ್ಕೂ, ಬೆಂಗಳೂರಿನ ತೆರಿಗೆ ಆದಾಯಕ್ಕೂ ಭಾರಿ ವ್ಯತ್ಯಾಸವಿದೆ. ಹೀಗಾಗಿ ಆ ಪ್ರದೇಶದ ಅಭಿವೃದ್ಧಿ ಮಾಡಲಾಗುವುದು” ಎಂದು ತಿಳಿಸಿದರು.
ರಸ್ತೆಗಳ ಪಟ್ಟಿ ನೀಡಿದರೆ ಎಂದು ಕೇಳಿದಾಗ, “ಯಾವ ರಸ್ತೆ ಪಟ್ಟಿಯೂ ಇಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಐಟಿ- ಬಿಟಿ ಕ್ಷೇತ್ರದವರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈಗ ಎಲ್ಲಾ ಪಾಲಿಕೆ ವ್ಯಾಪ್ತಿಯ ನಾಗರಿಕರೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ಮುಂದೆ ಕಂಪನಿಗಳ ಜೊತೆ ಚರ್ಚೆ ಮಾಡುವೆ. ಆನಂತರ ಬೆಂಗಳೂರು ಹೊರವಲಯದವರ ಜೊತೆ ಸಭೆ ಮಾಡಿ ಜನರಿಗೆ ಒಳ್ಳೆಯದಾಗುವಂತೆ ಕ್ರಮ ಕೈಗೊಳ್ಳುತ್ತೇವೆ” ಎಂದರು.
ಚಿತ್ತಾಪುರದಲ್ಲಿ ಬಿಜೆಪಿ ರ‌್ಯಾಲಿ ಹಮ್ಮಿಕೊಳ್ಳುವ ಬಗ್ಗೆ ಕೇಳಿದಾಗ, “ಈ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಾವು ಜನರ ಬದುಕು ಸುಧಾರಿಸಿ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಮಿಕ್ಕ ವಿಚಾರ ನಮಗೆ ಬೇಕಿಲ್ಲ” ಎಂದು ತಿಳಿಸಿದರು.