ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಲಾದ ಕನಿಷ್ಠ ವಯೋಮಿತಿಯನ್ನು ಸಡಿಲಿಸುವಂತೆ ಕೋರಿ ಪೋಷಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ, 2026-27ನೇ ಸಾಲಿನಲ್ಲಿ ಒಂದನೇ ತರಗತಿಗೆ ಸೇರುವ ಮಗುವು ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರೈಸಿರಬೇಕು. 2020ರ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನ್ವಯ ಈ ಕೆಳಗಿನಂತೆ ವಯೋಮಿತಿ ನಿಗದಿಯಾಗಿದೆ:
ಎಲ್‌ಕೆಜಿ: 4 ವರ್ಷ
ಯುಕೆಜಿ: 5 ವರ್ಷ
1ನೇ ತರಗತಿ: 6 ವರ್ಷ
ಲಕ್ಷಾಂತರ ಮಕ್ಕಳ ಭವಿಷ್ಯ ಅತಂತ್ರ:
ಸುಮಾರು 2.30 ಲಕ್ಷಕ್ಕೂ ಹೆಚ್ಚು ಮಕ್ಕಳು ಕೇವಲ ಕೆಲವೇ ದಿನಗಳ ಅಂತರದಲ್ಲಿ 6 ವರ್ಷ ಪೂರೈಸಲು ಸಾಧ್ಯವಾಗದೆ ಪ್ರವೇಶದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ವರ್ಷ ವ್ಯರ್ಥವಾಗುವ ಆತಂಕದಲ್ಲಿ ಪೋಷಕರಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಪೋಷಕರು ಮನವಿ ಮಾಡಿದ್ದಾರೆ.
ಹಿಂದಿನ ವರ್ಷದ ರಿಯಾಯಿತಿ:
ಕಳೆದ ವರ್ಷವೂ ಇದೇ ರೀತಿಯ ಸಮಸ್ಯೆ ಎದುರಾದಾಗ ಸರ್ಕಾರವು ಮಧ್ಯಪ್ರವೇಶಿಸಿ ವಯೋಮಿತಿಯನ್ನು 5 ವರ್ಷ 5 ತಿಂಗಳಿಗೆ ಇಳಿಸಿ ರಿಯಾಯಿತಿ ನೀಡಿತ್ತು. ಆದರೆ, ಈ ನಿರ್ಧಾರವು ಕೇವಲ 2025-26ನೇ ಸಾಲಿಗೆ ಮಾತ್ರ ಸೀಮಿತ ಎಂದು ಸಚಿವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು.
ಪೋಷಕರ ಬೇಡಿಕೆ:
ಪ್ರಸ್ತುತ ನಿಯಮದಿಂದಾಗಿ ಲಕ್ಷಾಂತರ ಮಕ್ಕಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ಆದ್ದರಿಂದ, ಈ ವರ್ಷವೂ ಕನಿಷ್ಠ ಮೂರು ತಿಂಗಳ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಪೋಷಕರ ನಿಯೋಗವು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.








