ಬೆಂಗಳೂರು:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆಯನ್ನು ಸಡಿಲಿಸುವಂತೆ ಚುನಾವಣಾ ಆಯೋಗವನ್ನು ಕೋರಿದ್ದಾರೆ, ಇದರಿಂದ ಸರ್ಕಾರವು ಬರ ಪರಿಸ್ಥಿತಿಯನ್ನು ಎದುರಿಸಲು ಸಭೆಗಳನ್ನು ಪ್ರಾರಂಭಿಸಬಹುದು ಎಂದಿದ್ದಾರೆ.
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿದಿದ್ದರೂ, ಜೂನ್ 4 ರಂದು ಫಲಿತಾಂಶ ಹೊರಬೀಳುವವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಶುಕ್ರವಾರ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ ವರದಿಯನ್ನು ಉಲ್ಲೇಖಿಸಿ, ಕರ್ನಾಟಕವು ಮಾನ್ಸೂನ್ ವಿಳಂಬವನ್ನು ಎದುರಿಸುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
‘ಎಲ್ಲ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ನಾಗರಿಕರು ಮತ್ತು ಪ್ರಾಣಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ನಿರ್ವಹಿಸುವುದು ಬಹಳ ಅವಶ್ಯಕ” ಎಂದು ಪ್ರಿಯಾಂಕ್ ಹೇಳಿದರು.
ಬರ ಮತ್ತು ಕುಡಿಯುವ ನೀರಿನ ವಿಷಯಗಳಿಗೆ ಸಂಬಂಧಿಸಿದ ಸಭೆಗಳ ಅಧ್ಯಕ್ಷತೆ ವಹಿಸಲು ಸಚಿವರಿಗೆ ಆಯೋಗದ ಅನುಮತಿ ನೀಡುವಂತೆ ಪ್ರಿಯಾಂಕ್ ಕೋರಿದರು. ಈ ಸಭೆಗಳನ್ನು ನಡೆಸುವುದು ಮಾತ್ರವಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾದರಿ ನೀತಿ ಸಂಹಿತೆಯನ್ನು ಸಡಿಲಿಸಬೇಕೆಂದು ಅವರು ಕೋರಿದರು.