ಬೆಂಗಳೂರು: “ಜೆ.ಪಿ ಉದ್ಯಾನದಲ್ಲಿ ಜಯಪ್ರಕಾಶ್ ನಾರಾಯಣ ಅವರ ಪುತ್ಥಳಿ ಮರು ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಉದ್ಯಾನದ ಸೌಂದರ್ಯೀಕರಣ, ಈಜುಕೊಳ, ಯೋಗಶಾಲೆ, ಜಿಮ್ ಹಾಗೂ ಮಕ್ಕಳ ಆಟದ ಮೈದಾನ, ಟಾಯ್ ಟ್ರೈನ್ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದರು.
‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಪ್ರಯುಕ್ತ ನಗರದ ಜೆ.ಪಿ ಉದ್ಯಾನದಲ್ಲಿ ಸಾರ್ವಜನಿಕರ ಜೊತೆ ಭಾನುವಾರ ಮುಂಜಾನೆ ಹೆಜ್ಜೆ ಹಾಕಿದ ಡಿಸಿಎಂ ಅವರು ಜನರ ಅಹವಾಲುಗಳನ್ನು ಆಲಿಸಿದರು. ಪಾಲಿಕೆ ಆಯುಕ್ತರು ಹಾಗೂ ಜೆ.ಪಿ.ಪಾರ್ಕ್ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಿಂದ ಉದ್ಯಾನದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಟಾಯ್ ಟ್ರೈನ್, ಮಕ್ಕಳ ಆಟಿಕೆಗಳು ಸೇರಿದಂತೆ ಮೂಲಸೌಕರ್ಯಗಳ ಕೊರತೆ ಏಕೆ ಉಂಟಾಗಿದೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಪ್ರತಿದಿನವೂ ಎಲ್ಲಾ ಶೌಚಾಲಯಗಳಿಗೂ ಬೀಗ ಹಾಕಲಾಗಿರುತ್ತದೆ ಎನ್ನುವ ದೂರಿಗೆ, “ಇನ್ನೆರಡು ದಿನದಲ್ಲಿ ಈ ಸಮಸ್ಯೆ ಬಗೆಹರಿಯಲೇ ಬೇಕು” ಎಂದು ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರಿಗೆ ಸೂಚನೆ ನೀಡಿದರು. ಜಿಮ್ ಪರಿಕರಗಳು ಹಾಳಾಗಿರುವುದನ್ನು ನೋಡಿದ ಡಿಸಿಎಂ ಅವರು ಗರಂ ಆದರು.
ಮಹಿಳಾ ನಡಿಗೆದಾರರು ನಮಗೆ ಪ್ರತ್ಯೇಕ ವಿಶ್ರಾಂತಿ ಕುಟೀರ ಬೇಕಾಗಿದೆ. ಹಳೆಯ ಜಾಗ ಸುಸ್ಥಿತಿಯಲ್ಲಿದೆ ಎಂದು ದೂರಿದರು. ಉದ್ಯಾನದಲ್ಲಿನ ಕೆರೆಗೆ ಈ ಮೊದಲು ಮಳೆ ನೀರು ಹರಿಯುತ್ತಿತ್ತು. ಈಗ ಬರುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದಾಗ, “ಹಾಗಾದರೆ ಕಾಲುವೆಯನ್ನು ಮುಚ್ಚಲಾಗಿದೆ. ಅದನ್ನು ಸರಿಪಡೊಸೋಣ” ಎಂದರು.
ಉದ್ಯಾನದ ಮೂಲೆಯೊಂದರಲ್ಲಿ ಬೇಲಿ ಕಿತ್ತು ಹಾಕಿ ಮಾದಕ ವ್ಯಸನಿಗಳ ಅಡ್ಡೆಯಾಗಿ ಮಾಡಿಕೊಳ್ಳಲಾಗಿದೆ ಎಂದು ದೂರಿದಾಗ, “ಚಲನವಲನಗಳನ್ನು ಗಮನಿಸಲು ಕ್ಯಾಮೆರಾ ಅಳವಡಿಸಬೇಕು, ಪೊಲೀಸರನ್ನು ನಿಯೋಜಿಸಬೇಕು, ವ್ಯಸನಿಗಳನ್ನು ಮಟ್ಟ ಹಾಕಬೇಕು” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಗೆ ಖಡಕ್ ಸೂಚನೆ ನೀಡಿದರು.
55 ವರ್ಷಗಳ ನಂತರ ಶಾಲಾ ಗೆಳೆಯನ ಭೇಟಿ
ಶಾಲಾ ದಿನಗಳ ಸಹಪಾಠಿ ಮಾಧವ ನಾಯಕ್ ಸಿಕ್ಕಿದ್ದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಡಿಸಿಎಂ ಅವರು “ನಾನು ಕಾರ್ಮೆಲ್ ಶಾಲೆಯಲ್ಲಿ ಓದುತ್ತಿದ್ದಾಗ ಶಾಲಾ ಚುನಾವಣೆಗೆ ನಿಂತಿದ್ದೆ. ನನಗೆ ಈತ ಮತ ಎಣಿಕೆ ಏಜೆಂಟ್ ಆಗಿದ್ದ. ಗಣಿತದಲ್ಲಿ ಬಹಳ s ಚುರುಕಿನ ವಿದ್ಯಾರ್ಥಿಯಾಗಿದ್ದ” ಎಂದು ಸಹಪಾಠಿಯ ಜೊತೆ ಫೋಟೋಗೆ ತೆಗೆಸಿಕೊಂಡರು.
“ಉದ್ಯಾನದಲ್ಲಿನ ಅಧ್ವಾನಗಳನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಅದರ ವಿಡಿಯೋ ಚಿತ್ರೀಕರಣ ಕೂಡ ಮಾಡಿಸಿದ್ದೇನೆ. ಜಿಬಿಎ ವ್ಯಾಪ್ತಿಯಲ್ಲಿ ಯಾವುದೇ ಕುಂದುಕೊರತೆಗಳು, ಸಮಸ್ಯೆಗಳು ಕಂಡುಬಂದರೆ 1533 ಸಹಾಯವಾಣಿಗೆ ದೂರು ನೀಡಿ ನಿಮ್ಮ ಅಹವಾಲನ್ನು ಸಲ್ಲಿಸಬಹುದು” ಎಂದರು.
“ಎಲ್ಲಿ ಕಸವಿದೆ, ರಸ್ತೆಗುಂಡಿಯಿದೆ ಎಂದು ಈ ಮೊದಲು ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆ ಸಾರ್ವಜನಿಕರಿಗೆ ಇತ್ತೇ? ನಾನು ಮೊಬೈಲ್ ಆ್ಯಪ್ ಮೂಲಕ ದೂರು ಸಲ್ಲಿಸುವ ವ್ಯವಸ್ಥೆ ತಂದಿದ್ದೇನೆ. ತೆರಿಗೆದಾರರಿಗೆ ಗೌರವ ಕೊಡಬೇಕಿರುವುದು ನಮ್ಮ ಕರ್ತವ್ಯ” ಎಂದರು.
“ಬೆಂಗಳೂರು ಯೋಜಿತ ನಗರವಲ್ಲ. ಕಂದಾಯ ಬಡಾವಣೆಗಳಾದ ನಂತರ ಪಾಲಿಕೆಯಾಗಿ ಪರಿವರ್ತನೆಯಾಗಿದೆ. ಕೆಲವೊಂದು ಕಡೆ ಮಾತ್ರ ಯೋಜಿತ ಬಡಾವಣೆಗಳಿವೆ. ಯಾವುದೇ ಪಕ್ಷವಿದ್ದರೂ ಸಹ ಸೇವೆ ಮಾಡಿದ್ದು ಮಾತ್ರ ಶಾಶ್ವತವಾಗಿ ಉಳಿದುಕೊಳ್ಳುತ್ತದೆ” ಎಂದರು.
“ರಾಜಕುಮಾರ್ ರಸ್ತೆಯಲ್ಲಿನ ಕಸದ ಸಮಸ್ಯೆ, ಮಂಗನಪಾಳ್ಯದ ಬಳಿ ಅಂಡರ್ ಪಾಸ್ ನಿರ್ಮಾಣ, ಗಂಗಮ್ಮ ಸರ್ಕಲ್ ಬಳಿಯ ಸಮಸ್ಯೆಗಳು ಸೇರಿದಂತೆ ಎಲ್ಲರ ಅಹವಾಲುಗಳಿಗೆ ನಮ್ಮ ಅಧಿಕಾರಿಗಳು ನಿಮ್ಮ ಬಳಿ ಬಂದು ಪರಿಹಾರ ಒದಗಿಸುತ್ತಾರೆ” ಎಂದರು.
ಆರ್ ಟಿಐ ಕಾರ್ಯಕರ್ತ ವಿನ್ಸೆಂಟ್ ಬರ್ನಾಡ್ ಅವರು ಜೆ.ಪಿ.ಪಾರ್ಕ್ ವ್ಯಾಪ್ತಿಯಲ್ಲಿ ಸುಮಾರು 44 ಕಾಮಗಾರಿಗಳು ಮಂಜೂರಾಗಿ ಶೇ. 80 ರಷ್ಟು ಹಣವೂ ಬಿಡುಗಡೆಯಾಗಿದೆ ಆದರೂ ಯಾವುದೇ ಕಾಮಗಾರಿಗಳು ನಡೆದಿಲ್ಲ ಎಂದು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, “ಇದರ ಬಗ್ಗೆ ತನಿಖೆ ಮಾಡುವಂತೆ ಸೂಚಿಸುತ್ತೇನೆ” ಎಂದರು.
ದಾಸರಹಳ್ಳಿ ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ಸಿ ಅಶೋಕ್ ಅವರು ರಾಕ್ ಲೈನ್ ಮಾಲ್ ಬಳಿ ರಸ್ತೆಗುಂಡಿ ಹಾಗೂ ದಾಸರಹಳ್ಳಿ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಬಗ್ಗೆ ತಿಳಿಸಿದಾಗ, “ಅಧಿಕಾರಿಗಳನ್ನ ಖುದ್ದಾಗಿ ಕಳುಹಿಸಿ ನಿಮ್ಮ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು” ಎಂದರು.
“ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಯುವ ಹಾಗೂ ಉತ್ಸಾಹಿಯಾಗಿದ್ದು ಶೀಘ್ರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ” ಎಂದರು.
ಮಾಧ್ಯಮ ಪ್ರತಿಕ್ರಿಯೆ:
ಸರ್ಕಾರ ಎರಡು ವರ್ಷದ ನಂತರ ಜನರ ಸಮಸ್ಯೆ ಕೇಳುತ್ತಿದೆಯೇ ಎಂದು ಕೇಳಿದಾಗ, “ಅಧಿಕಾರಕ್ಕೆ ಬಂದ ದಿನದಿಂದ ಕೇಳುತ್ತಿದ್ದೇವೆ. ಕಳೆದ ವರ್ಷ ಬಾಗಿಲಿಗೆ ಬಂತು ಸರಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಆಯೋಜಿಸಿ ಸಾವಿರಾರು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಯಾರು ಏನು ಕೆಲಸ ಮಾಡುತ್ತಾರೋ ಗೊತ್ತಿಲ್ಲ. ಬೆಂಗಳೂರು ಅಭಿವೃದ್ಧಿ ಜವಾಬ್ದಾರಿ ಹೊತ್ತುಕೊಂಡು ನನ್ನ ಕರ್ತವ್ಯ ನಾನು ಮಾಡುತ್ತಿದ್ದೇನೆ” ಎಂದರು.
“ಶಾಸಕರಿಗೆ ಕಮಿಷನ್ ನೀಡಲಿಲ್ಲ ಎಂದು ಕಳೆದ 10 ವರ್ಷಗಳಿಂದ ಬಿಲ್ ನೀಡಲು ಸತಾಯಿಸಲಾಗುತ್ತಿದೆ ಎನ್ನುವ ಗುತ್ತಿಗೆದಾರರ ಆರೋಪದ ಬಗ್ಗೆ ಪರಿಶೀಲನೆ ಮಾಡುತ್ತೇನೆ” ಎಂದರು.
“ಸಮಸ್ಯೆಗಳನ್ನು ತಿಳಿಸಿದ ನಾಗರಿಕರ ದೂರವಾಣಿ ಸಂಖ್ಯೆಗಳನ್ನು ತೆಗೆದುಕೊಂಡಿದ್ದು ಪಾಲಿಕೆ ಅಧಿಕಾರಿಗಳು ಮತ್ತೆ ಅವರಿಗೆ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಜನರು ನಮ್ಮ ಕರೆಗೆ ಸ್ಪಂದಿಸಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು ಸಂತಸವಾಯಿತು. ಪಾಲಿಕೆ ಸದಸ್ಯರಾಗಿದ್ದ ನಂಜುಡಪ್ಪ ಅವರ ಕಾಲದಲ್ಲಿ ಆಗಿದ್ದ ಕೆಲಸಗಳನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಜೆಪಿ ಉದ್ಯಾನದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು” ಎಂದು ಹೇಳಿದರು.
“ಜನರ ದ್ವನಿ ಸರ್ಕಾರಕ್ಕೆ ತಿಳಿಯಬೇಕು ಎಂದು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಸರ್ಕಾರ ಜನರಿಗೆ ಸ್ಪಂದಿಸಬೇಕು ಇದೇ ನಮ್ಮ ಉದ್ದೇಶ” ಎಂದರು.
ಕಾರ್ಯಕ್ರಮಕ್ಕೆ ಆರಂಭದಲ್ಲಿಯೇ ಶಾಸಕ ಮುನಿರತ್ನ ಅಡ್ಡಿ ಪಡಿಸಿದ ಬಗ್ಗೆ ಕೇಳಿದಾಗ, “ಅವರಿಗೆ ರಾಜಕೀಯ ಮುಖ್ಯ. ಅವರು ಆರ್ ಎಸ್ ಎಸ್ ಸಂಸ್ಥೆಗೆ ಅಗೌರವ ತೋರುವ ಕೆಲಸ ಮಾಡಿದ್ದಾರೆ. ಆರ್ ಎಸ್ ಎಸ್ ಗೂ ಈ ಕಾರ್ಯಕ್ರಮಕ್ಕೂ ಏನು ಸಂಬಂಧ. ಇಲ್ಲಿಗೆ ಆ ಸಂಸ್ಥೆಯ ಟೋಪಿ, ಸಮವಸ್ತ್ರ ಧರಿಸಿ ಬರುವ ಅವಶ್ಯಕತೆ ಏನಿತ್ತು? ಆ ಸಂಸ್ಥೆ ತನ್ನದೇ ಆದ ಕೆಲಸ ಮಾಡುತ್ತಿದೆ. ಅವರು ಮಾಡಿದ ಕೆಲಸ ನನಗೆ ಮಾಡಿದ ಅವಮಾನವಲ್ಲ. ಆ ಸಂಸ್ಥೆಗೆ ಮಾಡಿದ ಅವಮಾನ. ಅದಕ್ಕೆ ಒಂದು ಇತಿಹಾಸವಿದೆ” ಎಂದರು.
“ಶಾಸಕರನ್ನು ನಾಗರಿಕರೇ ಒಡೆದು ಓಡಿಸುತ್ತಿದ್ದರು. ಅವರ ವರ್ತನೆಯಿಂದ ಜನಕ್ಕೆ ಅಷ್ಟು ರೋಷ ಬಂತು. ಅವರು ಏನಾದರೂ ಮಾಡಿಕೊಳ್ಳಲಿ” ಎಂದು ಹೇಳಿದರು.
ಚುನಾವಣೆ ನಂತರ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಕೇಳಿದಾಗ, “ಇದು ಯಾವುದೇ ಶಿಲಾನ್ಯಾಸ ಕಾರ್ಯಕ್ರಮವಲ್ಲ. ಎಲ್ಲಾ ಸಾರ್ವಜನಿಕರಿಗೂ ಮುಕ್ತ ಆಹ್ವಾನವಿದ್ದ ಕಾರ್ಯಕ್ರಮ. ಜನರ ಸಮಸ್ಯೆಗಳನ್ನು ಅರಿಯುವ ಕಾರ್ಯಕ್ರಮ. ಜನಪ್ರತಿನಿಧಿಗೆ ಏನು ಗೌರವ ನೀಡಬೇಕೊ ಅದನ್ನು ನೀಡುತ್ತೇವೆ. ಲಾಲ್ ಬಾಗ್ ನಡಿಗೆ ವೇಳೆ ರಿಜ್ವಾನ್ ಹರ್ಷದ್ ಭಾಗವಹಿಸಿದ್ದರು. ಅವರು ಮಾತನಾಡದೆ ಜನರು ಮಾತನಾಡಲು ಅವಕಾಶ ನೀಡಿದರು. ಇಲ್ಲಿನ ಶಾಸಕರು ಸದನದಲ್ಲಿ ಮಾತನಾಡಬಹುದು. ಜಿಬಿಎ ಸಭೆಯಲ್ಲಿ ತಮ್ಮ ದುಃಖ ದುಮ್ಮಾನಗಳನ್ನ ತಿಳಿಸಬಹುದಿತ್ತು, ಆದರೆ ಬರಲಿಲ್ಲ. ಅವರಿಗೆ ಪ್ರಚಾರ ಬೇಕು. ಮಾಧ್ಯಮಗಳು ಸಹ ಅವರಿಗೆ ಪ್ರಚಾರ ನೀಡುತ್ತಾರೆ” ಎಂದರು.
ಡಿ.ಕೆ.ಸುರೇಶ್ ಸೋಲಿನ ನಂತರ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಅದಕ್ಕೆಲ್ಲಾ ತನಿಖೆ ನಡೆಸಲು ಸಂಸ್ಥೆಗಳಿವೆ ಅಲ್ಲಿಗೆ ಹೋಗಿ ದೂರು ನೀಡಲಿ” ಎಂದರು.
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion