ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯ ಹಿತದೃಷ್ಟಿಯಿಂದ ನಿನ್ನೆ ನಡೆದ ಸಭೆಯಲ್ಲಿ ಟೀಕೆಗಳ ಹೊರತಾಗಿ, ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಸಲಹೆಗಳನ್ನು ಗಮನಿಸಿ, ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಆ ಪ್ರಕಾರ ಏನು ಮಾಡಬಹುದು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ. ತದನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮಳೆಗಾಲ ಮುಗಿದ ನಂತರ ಎಲ್ಲ ಧಾರ್ಮಿಕ ಮುಖಂಡರನ್ನೊಳಗೊಂಡತೆ ದೊಡ್ಡಮಟ್ಡದ ಸಭೆ ಮಾಡಲು ಸಲಹೆ ಕೊಟ್ಟಿದ್ದಾರೆ. ಕಟ್ಟುನಿಟ್ಟಿನ ಕಾನೂನು ಪಾಲನೆ ಮಾಡುವುದು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟಿಂಗ್ ಮಾಡುವುದನ್ನು ನಿಲ್ಲಿಸಬೇಕು ಎಂದು ಕರೆ ಕೊಡಲಾಗಿದೆ. ಇದನ್ನು ಮುಂದುವವರಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅನೇಕ ಕ್ರಮಗಳನ್ನು ತೆಗೆದುಕೊಂಡು, ಆ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ. ಈಗಾಗಲೇ ಒಂದಿಷ್ಟು ಬದಲಾವಣೆಗಳನ್ನು ನೋಡಬಹುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಸೂಕ್ಷ್ಮತೆ ಜಿಲ್ಲೆ ಎನ್ನುವುದು ಬೇಡ. ಕೆಲವು ಘಟನೆಗಳು, ಅಪರಾಧಗಳಿಂದ ಹೀಗೆಲ್ಲ ಆಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ಡ್ರಗ್ಸ್ ನಿಯಂತ್ರಣದ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಡ್ರಗ್ಸ್ ಚಟುವಟಿಕೆಗಳನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ಮರಳು ಮಾಫಿಯಾ ಬಗ್ಗೆ ಗಮನಕ್ಕೆ ತಂದಿದ್ದಾರೆ. ಲ್ಯಾಟರೈಟ್ ಮಣ್ಣಿನ ಮಾಫಿಯಾ ಅಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.
ಶಾಸಕರುಗಳು ಹೇಳಿಕೆಗಳನ್ನು ನೀಡುತ್ತಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ವಿಚಾರದ ಕುರಿತು ಪದೇಪದೆ ಚರ್ಚೆಯಾಗುವುದು, ಹೇಳಿಕೆಗಳನ್ನು ನೀಡುವುದು ಆಗಬಾರದು. ಆಡಳಿತದಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ಆಡಳಿತ ನಡೆಯುತ್ತಿದೆ. ಮುಖ್ಯಮಂತ್ರಿಯವರು ಆಡಳಿತ ಮಾಡುತ್ತಿದ್ದಾರೆ ಎಂದರು.
ಡ್ರಾಮಾ ಕಂಪನಿ ನಾನು ಓಪನ್ ಮಾಡೋಕೆ ಇಷ್ಟವಿಲ್ಲ ಅಂತ ಹೇಳಿದ್ದೇನೆ. ಇದನ್ನು ಬಿಟ್ಟುಬಿಡೋಣ. ನನಗಿರುವ ರಾಜಕೀಯ ಅನುಭವದಂತೆ ಹೈಕಮಾಂಡ್‌ನವರು ಎಲ್ಲವನ್ನು ಗಮನಿಸುತ್ತಾರೆ. ಸಂದರ್ಭ ಬಂದಾಗ ಅವರು ತೀರ್ಮಾನಗಳನ್ನು ಮಾಡುತ್ತಾರೆ ಎಂದು ಹೇಳಿದರು.
ಈಗ ಆ ಸಂದರ್ಭ ಬಂದಿದೆಯಾ? ನಾಳೆ ಸಂದರ್ಭ ಇದಿಯಾ? ಹಿಂದೆ ಇತ್ತ ಎನ್ನುವುದನ್ನು ನಾನು ಹೇಳಲು ಹೋಗುವುದಿಲ್ಲ. ಅವರಿಗೆ ಎಲ್ಲವೂ ಗೊತ್ತಿದೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ಹೈಕಮಾಂಡ್‌ನವರಿಗೆ ಗೊತ್ತಿದೆ. ಶಾಸಕರ ಹೇಳಿಕೆಗಳನ್ನು ನಿಯಂತ್ರಿಸಲು ಪಕ್ಷದ ಅಧ್ಯಕ್ಷರಿದ್ದಾರೆ. ಅವರು ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.
ದಲಿತ ಅಧಿಕಾರಿಗಳಿಗೆ ಪ್ರಾತಿನಿಧ್ಯ ಕಡಿಮೆಯಾಗಿದೆ ಎಂಬುದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಬಳಿ ಆ ರೀತಿಯ ಮನವಿ ಬಂದಿಲ್ಲ. ಈ ಕುರಿತು ಯಾರು ನನ್ನ ಬಳಿ ಮಾತನಾಡಿಲ್ಲ. ಅಂತದ್ದು ಏನಾದರು ಇದ್ದರೆ, ಕಾನೂನು ಚೌಕಟ್ಟಿನಲ್ಲಿ, ಮೀಸಲಾತಿ ಚೌಕಟ್ಟಿನಲ್ಲಿ ಸರಿಪಡಿಸಲು ಸರ್ಕಾರದ ಹಂತದಲ್ಲಿ ಮಾಡಲು ಒತ್ತಾಯ ಮಾಡುತ್ತೇನೆ ಎಂದರು.
ಒಳಮೀಸಲಾತಿ ಉದ್ದೇಶದಿಂದ ನೇಮಕಾತಿಯನ್ನು ನಿಲ್ಲಿಸಿದ್ದಾರೆ. ಒಳ ಮೀಸಲಾತಿ ಸಮಸ್ಯೆ ಬಗೆಹರಿದ ತಕ್ಷಣ ನೇಮಕಾತಿ ಪ್ರಾರಂಭವಾಗುತ್ತದೆ. ಆ ಸಂದರ್ಭದಲ್ಲಿ ಒಳಮೀಸಲಾತಿ ಚೌಕಟ್ಟಿನಲ್ಲಿ ಯಾರಿಗೆ ಎಷ್ಟೆಷ್ಟು ಮೀಸಲಾತಿ ಎಂಬುದು ನಿರ್ಧಾರ ಆಗುತ್ತದೆ. ಅದರ ಪ್ರಕಾರ ಮಾಡುತ್ತಾರೆ.ಎಸ್‌ಸಿ, ಎಸ್‌ಟಿ ಸೇರಿ ಜನಸಂಖ್ಯೆ ಶೇ. 24.1 ಇದೆ. ಅದರ ಪ್ರಕಾರ ಹಂಚಿಕೆಯಾಗಬೇಕಾಗುತ್ತದೆ ಎಂದು ಹೇಳಿದರು.