ಬೆಳಗಾವಿ ಸುವರ್ಣ ವಿಧಾನಸೌಧ : ಬರುವ ಶೈಕ್ಷಣಿಕ ವರ್ಷದೊಳಗೆ 11ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರು ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಕುರಿತು ಮಾಹಿತಿಯನ್ನು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ರಾಜ್ಯದಲ್ಲಿ 41,088 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 178935 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 133345 ಹುದ್ದೆಗಳು ಭರ್ತಿಯಾಗಿದ್ದು, 45590 ಹುದ್ದೆಗಳು ಖಾಲಿ ಇರುತ್ತವೆ. ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ 5024 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಈ ಪ್ರೌಢಶಾಲೆಗಳಿಗೆ 44,144 ಹುದ್ದೆಗಳು ಮಂಜೂರಾಗಿರುತ್ತವೆ. ಈ ಪೈಕಿ 32010 ಹುದ್ದೆಗಳು ಭರ್ತಿಯಾಗಿದ್ದು 12,134 ಹುದ್ದೆಗಳು ಖಾಲಿ ಇರುತ್ತವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳಗೆ ಎದುರಾಗಿ 2025-2026ನೇ ಶೈಕ್ಷಣಿಕ ಸಾಲಿಗೆ ಪ್ರಾಥಮಿಕ ಶಾಲೆಗಳಲ್ಲಿ 40,000 ಮತ್ತು ಪ್ರೌಢಶಾಲೆಗಳಲ್ಲಿ 11,000 ಒಟ್ಟಾರೆಯಾಗಿ 51,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವ ಮೂಲಕ ಶಿಕ್ಷಕರ ಕೊರತೆಯನ್ನು ಸರಿದೂರಿಸಲಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ಅಲ್ಲದೇ ವಿಕಲಚೇತನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.








