ಕಲಬುರಗಿ : ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಮತ್ತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕರ್ನಾಟಕ ರಾಜ್ಯ ಕುರುಬಗೊಂಡ ಸಂಘ ಮತ್ತು ಸಂಗೊಳ್ಳಿ ರಾಯಣ್ಣ ಯುವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಯಣ್ಣನವರ ಮೂರ್ತಿ ಅನಾವರಣಗೊಳಿಸಿ, ನಗರ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನವರ ಹೆಸರು ನಾಮಕರಣ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕುರುಬ ಜನಾಂಗವನ್ನು ಎಸ್ಟಿಗೆ ಸೇರ್ಪಡೆ ಮಾಡುವ ಸಂಬಂಧ ಕೇಂದ್ರವೇ ನಿರ್ಧರಿಸಬೇಕು. ರಾಜ್ಯ ಕೇವಲ ಶಿಫಾರಸು ಮಾಡಬಹುದು. ಅಲ್ಲದೆ ‘ಸೆ.22ರಿಂದ ಅ.7ರವರೆಗೆ ನಡೆವ ಜಾತಿ ಸಮೀಕ್ಷೆ ವೇಳೆ ಕುರುಬ ಅಂತಲೇ ಜಾತಿ ಕಾಲಂನಲ್ಲಿ ಬರೆಯಿಸಿ‘ ಎಂದ ಕುರುಬರಿಗೆ ಕರೆ ನೀಡಿದ್ದಾರೆ.
ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಹಿಂದೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅದನ್ನು ಕೇಂದ್ರ ಸರ್ಕಾರ ವಾಪಾಸ್ ಕಳುಹಿಸಿದೆ. ಹೀಗಾಗಿ ಮತ್ತೆ ಹೆಚ್ಚುವರಿ ಅಂಕಿ ಅಂಶಗಳು ಮತ್ತು ದಾಖಲೆಗಳ ಸಮೇತ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲಾಗುವುದು.
ರಾಯಣ್ಣ ಜನ್ಮದಿನ ಸ್ವಾತಂತ್ರ್ಯೋತ್ಸವದ ಆಗಸ್ಟ್ 15. ರಾಯಣ್ಣರನ್ನು ಬ್ರಿಟಿಷರು ಗಲ್ಲಿಗೆ ಏರಿಸಿದ್ದು ಜನವರಿ 26ರ ಗಣರಾಜ್ಯೋತ್ಸವ ದಿನದಂದು. ಇದು ಕಾಕತಾಳೀಯ ಆದರೂ ಸತ್ಯವಾದ ಸಂಗತಿ. ಸ್ವಾತಂತ್ರ್ಯ ಸೇನಾನಿ ರಾಯಣ್ಣ ಯುವಕರಿಗೆ ಪ್ರೇರಣೆ ಆಗಿದ್ದಾರೆ.
ಶೇ.7 ರಷ್ಟಿರುವ ಕುರುಬ ಸಮುದಾಯ ಶಿಕ್ಷಣದಲ್ಲಿ ಬಹಳ ಹಿಂದುಳಿದಿದೆ. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ವಿದ್ಯಾವಂತರಾಗುವುದು ಅವಶ್ಯವಾಗಿದೆ. ಸಮುದಾಯವನ್ನು ಶಿಕ್ಷಣ ಕ್ಷೇತ್ರದಲ್ಲಿ ಉನ್ನತೀಕರಿಸಬೇಕಿದೆ.
ನಾವು ರಾಜ್ಯ ಪ್ರವಾಸ ಮಾಡಿ ಕನಕ ಗುರುಪೀಠ ಸ್ಥಾಪಿಸಿದೆವು. ಪೀಠದ ಉದ್ದೇಶ ಎಲ್ಲಾ ಶೋಷಿತ ಸಮುದಾಯಗಳಿಗೂ ಶಿಕ್ಷಣ ಕೊಡುವುದೇ ಆಗಿತ್ತು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನಾರಾಯಣಗುರು ಇಬ್ಬರೂ ಶಿಕ್ಷಣದಿಂದ ಸ್ವತಂತ್ರರಾಗಬಹುದು, ಸ್ವಾಭಿಮಾನಿಗಳಾಗಬಹುದು ಎಂದು ಹೇಳಿದ್ದಾರೆ.
ಇಡೀ ರಾಜ್ಯ ಸುತ್ತಿ ಮಠ ಮಾಡಿದ್ದು ನಾವು. ಆದರೆ ಈಗ ಕೆಲವು ಡೋಂಗಿ ಜನ ನಾವೇ ಮಠದ ಸ್ಥಾಪನೆ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಮಾತು ನಂಬಬೇಡಿ. ತೀರ್ಮಾನ ನಿಮಗೆ ಬಿಡುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲೆ ಇರಲಿ. ನಾನು ರಾಜಕಾರಣ ಮಾಡೋದೇ ಸಾಮಾಜಿಕ ನ್ಯಾಯಕ್ಕಾಗಿ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಸಾಮಾಜಿಕ ನ್ಯಾಯಕ್ಕಾಗಿಯೇ ಕೆಲಸ ಮಾಡುತ್ತೇನೆ. ನಾವೆಲ್ಲರೂ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರು ನಡೆದ ದಾರಿಯಲ್ಲೇ ನಡೆಯೋಣ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಜಾತಿ, ಸಮುದಾಯಗಳ ಸ್ಪಷ್ಟ ಸ್ಥಿತಿ ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಮೀಕ್ಷೆ ವೇಳೆ ಕುರುಬ ಅಂತಲೇ ಜಾತಿ ಹೆಸರನ್ನು ಬರೆಸಿದರೆ ಮಾತ್ರ ಸಮಾಜದ ಸ್ಥಿತಿಗತಿಯ ಸ್ಪಷ್ಟ ಚಿತ್ರಣ ಮತ್ತು ಸಾಮಾಜಿಕ ಅನುಕೂಲಗಳು ಸಿಗುತ್ತವೆ.
ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ… pic.twitter.com/8MKBwYoefh
— Siddaramaiah (@siddaramaiah) September 17, 2025