ಮಾಸ್ಕೋ: ಜಗತ್ತನ್ನೇ ನಡುಗಿಸಿದ್ದ ಚೆರ್ನೋಬಿಲ್ ಪರಮಾಣು ದುರಂತದ 40ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮಗಳು ನಡೆಯುತ್ತಿರುವ ಬೆನ್ನಲ್ಲೇ, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ ನಡೆದ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್‌ನ ಡಿಪ್ರೊ (Dnipro) ನಗರದ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 9ಕ್ಕೇರಿದೆ. ಇತ್ತ ರಷ್ಯಾದ ಬೆಲ್ಗೊರೊಡ್ ಮತ್ತು ಕ್ರೈಮಿಯಾದ ಸೆವಾಸ್ಟೊಪೋಲ್ ಮೇಲೆ ಉಕ್ರೇನ್ ನಡೆಸಿದ ಪ್ರತಿದಾಳಿಯಲ್ಲಿಯೂ ಸಾವು-ನೋವುಗಳು ಸಂಭವಿಸಿವೆ. ಲುಹಾನ್ಸ್ಕ್ ಪ್ರಾಂತ್ಯದ ಗ್ರಾಮವೊಂದರ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ರಷ್ಯಾ ಬೆಂಬಲಿತ ಅಧಿಕಾರಿಗಳು ತಿಳಿಸಿದ್ದಾರೆ.
1986ರ ಏಪ್ರಿಲ್ 26ರಂದು ನಡೆದ ಚೆರ್ನೋಬಿಲ್ ಪರಮಾಣು ದುರಂತಕ್ಕೆ ಈಗ 40 ವರ್ಷ ತುಂಬಿದೆ. ಈ ಸಂದರ್ಭದಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದ ಈ ದಾಳಿಗಳನ್ನು “ಪರಮಾಣು ಭಯೋತ್ಪಾದನೆ” ಎಂದು ಕರೆದಿದ್ದಾರೆ. ರಷ್ಯಾದ ಡ್ರೋನ್‌ಗಳು ಪದೇ ಪದೇ ಚೆರ್ನೋಬಿಲ್ ಪ್ಲಾಂಟ್‌ನ ವಾಯುಪ್ರದೇಶವನ್ನು ಉಲ್ಲಂಘಿಸುತ್ತಿದ್ದು, ಮತ್ತೊಂದು ಅನಾಹುತಕ್ಕೆ ಹಾದಿ ಮಾಡಿಕೊಡುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ.
ಉಕ್ರೇನ್ ಪಡೆಗಳು ರಷ್ಯಾದ ಒಳಭಾಗದಲ್ಲಿರುವ ಯಾರೋಸ್ಲಾವ್ಲ್ (Yaroslavl) ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್ ದಾಳಿ ನಡೆಸಿದ್ದು, ಅಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದು ರಷ್ಯಾದ ಮಿಲಿಟರಿಗೆ ಇಂಧನ ಪೂರೈಸುವ ಪ್ರಮುಖ ಕೇಂದ್ರವಾಗಿದೆ ಎಂದು ಉಕ್ರೇನ್ ಮಿಲಿಟರಿ ಪ್ರತಿಪಾದಿಸಿದೆ.








