ಮಡಿಕೇರಿ: ಭಾರತ ಸರ್ಕಾರವು ಸಾರ್ವಜನಿಕ ಆರೋಗ್ಯದ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಒಬ್ಬ ವ್ಯಕ್ತಿಯ ಆರೋಗ್ಯದ ಮಾಹಿತಿಯನ್ನು ಒಂದೇ ಸೂರಿನಡಿ ಒದಗಿಸಿ ಆರೋಗ್ಯದ ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಲು ಆಯುಷ್ಮಾನ್ ಭಾರತ್ ಆರೋಗ್ಯ ಅಕೌಂಟ್ (ಎಬಿಎಚ್‍ಎ/ಅಭಾ) ಕಾರ್ಡ್ ಯೋಜನೆ ಆರಂಭಿಸಿದೆ.

ಈ ಯೋಜನೆಯಡಿಯಲ್ಲಿ ಫಲಾನುಭವಿಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದರ ಜೊತೆಗೆ ಚಿಕಿತ್ಸೆಯ ಮಾಹಿತಿಯನ್ನು ದೇಶದ ಯಾವುದೇ ಭಾಗದಲ್ಲಿ ಆನ್‍ಲೈನ್ ಮೂಲಕ ಪಡೆಯಬಹುದಾಗಿದೆ. ಸಾರ್ವಜನಿಕರು ಗ್ರಾಮ ಒನ್ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಅಕೌಂಟ್ ಕಾರ್ಡ್‍ಗೆ ಅರ್ಜಿ ಸಲ್ಲಿಸುವುದರ ಮೂಲಕ ಇದರ ಸೌಲಭ್ಯ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ತಿಳಿಸಿದ್ದಾರೆ.

ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಅಭಾ ಕಾರ್ಡ್ ನೋಂದಣಿ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷದವರೆಗಿನ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡುದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ ಶೇ.30 ರಷ್ಟು ರಿಯಾಯಿತಿ ಯು ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್‍ನಿಂದ ದೊರೆಯಲಿದೆ.
ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್ ಮಾಡಿಸಲು ಆಧಾರ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್‍ಗೆ ಜೋಡಣೆಯಾಗಿರುವ ದೂರವಾಣಿ ಸಂಖ್ಯೆ ಮತ್ತು ಪಡಿತರ ಚೀಟಿ. (ಮನೆಯ ಎಲ್ಲಾ ಸದಸ್ಯರ ಅಭಾ ಕಾರ್ಡನ್ನು ಒಬ್ಬ ಸದಸ್ಯ ಮಾಡಬಹುದು. ಆದರೆ ಎಲ್ಲರ ಆಧಾರ್ ಕಾರ್ಡಿನ ಪ್ರತಿ ಇರಬೇಕು ಮತ್ತು ಆಧಾರ್ ಕಾರ್ಡ್‍ಗೆ ಜೋಡಣೆಯಾಗಿರುವ ಮೊಬೈಲ್ ನಂಬರಿಗೆ ಬರುವ ಒಟಿಪಿ ತಿಳಿಸಬೇಕಿದೆ).

Share.
Exit mobile version