ನವದೆಹಲಿ :ದ್ವೈಮಾಸಿಕ ಹಣಕಾಸು ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ್ದು, ಬಡ್ಡಿ ದರಗಳನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ. ಹೀಗಾಗಿ ಸಾಲ, ಠೇವಣಿ ಬಡ್ಡಿ ದರಗಳಲ್ಲಿ ಪರಿಷ್ಕರಣೆಯಾಗುವುದಿಲ್ಲ.
ಮೂವರು ಆರ್‌ಬಿಐ ಮತ್ತು ಅಷ್ಟೇ ಸಂಖ್ಯೆಯ ಬಾಹ್ಯ ಸದಸ್ಯರನ್ನು ಒಳಗೊಂಡಿರುವ ಹಣಕಾಸು ನೀತಿ ಸಮಿತಿಯು ಸತತ ಎಂಟನೇ ಬಾರಿಗೆ ರೆಪೊ ದರವನ್ನು ಶೇಕಡಾ 6.50ರ ಯಥಾಸ್ಥಿತಿಯಲ್ಲಿ ಇರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿ ದರವನ್ನು ಆರ್‌ಬಿಐ ಶೇ.7.2 ಎಂದು ಅಂದಾಜಿಸಿದೆ. ಈ ಹಿಂದೆ ಅದನ್ನು ಶೇ.7 ಎಂದು ಅಂದಾಜಿಸಲಾಗಿತ್ತು. ಹಣದುಬ್ಬರದ ಅಂದಾಜನ್ನು ಶೇ.4.5 ರಲ್ಲೇ ಮುಂದುವರಿಸಲಾಗಿದೆ.