ಮುಂಬೈ: ಆನ್ಲೈನ್ ಬ್ಯಾಂಕಿಂಗ್ ಮತ್ತು ಯುಪಿಐ (UPI) ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರ ಹಣಕ್ಕೆ ಹೆಚ್ಚಿನ ಭದ್ರತೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ‘ಕಿಲ್ ಸ್ವಿಚ್’ (Kill Switch) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಬ್ಯಾಂಕುಗಳಿಗೆ ಸೂಚಿಸಿದೆ. ಈ ಸೌಲಭ್ಯವು ಜಾರಿಗೆ ಬಂದರೆ, ಗ್ರಾಹಕರು ತಮ್ಮ ಖಾತೆಯಿಂದ ನಡೆಯುವ ಯಾವುದೇ ಅನಧಿಕೃತ ವ್ಯವಹಾರಗಳನ್ನು ತಕ್ಷಣವೇ ತಾವೇ ನಿಯಂತ್ರಿಸಬಹುದಾಗಿದೆ.
’ಕಿಲ್ ಸ್ವಿಚ್’ ಎಂಬುದು ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಆಪ್ಗಳಲ್ಲಿ ಇರುವ ಒಂದು ವಿಶೇಷ ಫೀಚರ್. ನಿಮ್ಮ ಫೋನ್ ಕಳುವಾದಾಗ ಅಥವಾ ನಿಮ್ಮ ಖಾತೆಯಿಂದ ನಿಮ್ಮ ಗಮನಕ್ಕೆ ಬಾರದಂತೆ ಹಣ ಕಡಿತವಾಗುತ್ತಿದ್ದರೆ, ಈ ಸ್ವಿಚ್ ಬಳಸುವ ಮೂಲಕ ನಿಮ್ಮ ಖಾತೆಯ ಎಲ್ಲಾ ಡಿಜಿಟಲ್ ಸೇವೆಗಳನ್ನು (UPI, ಅಂತರಾಷ್ಟ್ರೀಯ ಪಾವತಿ, ಎಟಿಎಂ ವಿತ್ಡ್ರಾ) ತಕ್ಷಣವೇ ಲಾಕ್ ಮಾಡಬಹುದು.
ಮೊಬೈಲ್ ಆಪ್ನಲ್ಲಿರುವ ‘ಕಿಲ್ ಸ್ವಿಚ್’ ಒತ್ತಿದ ಕೂಡಲೇ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ವಹಿವಾಟುಗಳು ಸ್ಥಗಿತಗೊಳ್ಳುತ್ತವೆ. ಬ್ಯಾಂಕ್ಗೆ ಕರೆ ಮಾಡಿ ಅಥವಾ ಕಸ್ಟಮರ್ ಕೇರ್ ಸಂಪರ್ಕಿಸಿ ಖಾತೆ ಬ್ಲಾಕ್ ಮಾಡುವವರೆಗೆ ಕಾಯುವ ಅಗತ್ಯವಿರುವುದಿಲ್ಲ. ಗ್ರಾಹಕರೇ ತಕ್ಷಣದ ಕ್ರಮ ಕೈಗೊಳ್ಳಬಹುದು.
ಪರಿಸ್ಥಿತಿ ತಿಳಿಯಾದ ನಂತರ ಅಥವಾ ನಿಮ್ಮ ಫೋನ್ ಕೈ ಸೇರಿದ ನಂತರ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಥವಾ ಸುರಕ್ಷಿತ ಕ್ರಮಗಳ ಮೂಲಕ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್ಗಳು ಲಿಂಕ್ಗಳ ಮೂಲಕ ಅಥವಾ ಒಟಿಪಿ (OTP) ಮೂಲಕ ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸುವ ಪ್ರಕರಣಗಳು ಹೆಚ್ಚಾಗಿವೆ. ಹಣ ಕಳೆದುಕೊಂಡ ನಂತರ ಬ್ಯಾಂಕ್ಗೆ ಮಾಹಿತಿ ನೀಡುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಈ ವಿಳಂಬವನ್ನು ತಪ್ಪಿಸಲು ಆರ್ಬಿಐ ಈ ಮಾಸ್ಟರ್ ಪ್ಲಾನ್ ರೂಪಿಸಿದೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ತಮ್ಮ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಈ ‘ಕಿಲ್ ಸ್ವಿಚ್’ ಆಯ್ಕೆಯನ್ನು ಸುಲಭವಾಗಿ ಪತ್ತೆಹಚ್ಚುವಂತೆ ಅಳವಡಿಸಬೇಕು ಎಂದು ಆರ್ಬಿಐ ತಿಳಿಸಿದೆ. ಇದು ಡಿಜಿಟಲ್ ಪಾವತಿ ವ್ಯವಸ್ಥೆಯ ಮೇಲೆ ಗ್ರಾಹಕರಿಗೆ ಹೆಚ್ಚಿನ ವಿಶ್ವಾಸ ಮೂಡಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








