ಬೆಂಗಳೂರು: ʼಭಾರತದ ಹೃದಯ ಹಳ್ಳಿಗಳಲ್ಲಿದೆʼ ಎಂದು ಬಣ್ಣಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸಾಕಾರಗೊಂಡಿರುವ ʼಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ʼ ಜಾರಿಗೊಂಡು 30 ವರ್ಷಗಳುಸಂದಿವೆ. ಸಾರ್ಥಕ ಮೂರು ದಶಕಗಳ ಪ್ರಯಾಣವನ್ನು ಸಂಭ್ರಮಿಸುವ ದಿಸೆಯಲ್ಲಿ ನವೆಂಬರ್ 13 ಹಾಗೂ 14ರಂದು ರಾಷ್ಟ್ರೀಯ ಸ್ವರಾಜ್ ಸಮ್ಮೇಳನʼ ಆಯೋಜಿಸಲು ಉದ್ದೇಶಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಸಂಬಂಧದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ, ಕರ್ನಾಟಕದಲ್ಲಿ 30 ವರ್ಷಗಳ ಕಾಲ ಪಂಚಾಯತ್ ವ್ಯವಸ್ಥೆ ನಡೆದು ಬಂದ ಹಾದಿ ಕುರಿತು ಅವಲೋಕನ ಮಾಡುವ ಹಾಗೂ ಮುಂದಿನ 30 ವರ್ಷಗಳಿಗೆ ಅನ್ವಯವಾಗುವ ಕರ್ನಾಟಕ ಸ್ವರಾಜ್ಯ ಚಾರ್ಟರ್ ರೂಪಿಸುವ ಕುರಿತು ವಿಚಾರ ಸಂಕಿರಣ, ದುಂಡುಮೇಜಿನ ಪರಿಷತ್ತು, ಕಾರ್ಯಾಗಾರ, ಸಂವಾದ, ಚರ್ಚಾಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಈ ಕಾರ್ಯಕ್ರಮಗಳಿಗೆ ರಾಜ್ಯ ಹಾಗೂ ರಾಷ್ಟ್ಟಮಟ್ಟದಲ್ಲಿ ಹೆಸರು ಗಳಿಸಿದವರೇ ಅಲ್ಲದೇ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಾಮಾಜಿಕ ತಜ್ಞರು, ಆರ್ಥಿಕ ತಜ್ಞರು, ಕಾನೂನು ತಜ್ಞರು, ಆಡಳಿತ ತಜ್ಞರು, ಸಂವಿಧಾನ ತಜ್ಞರು, ವಿಷಯ ತಜ್ಞರೇ ಮುಂತಾದ ಪರಿಣಿತರನ್ನು ಆಹ್ವಾನಿಸಲಾಗುವುದು. ಈ ಗೋಷ್ಠಿಗಳ ನಂತರ ಹೊಮ್ಮುವ ವಿಚಾರಗಳನ್ನು ಆಧರಿಸಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಮುಂದಿನ 30 ವರ್ಷಗಳಿಗೆ ಕರ್ನಾಟಕ ಹಾಗೂ ಭಾರತದ ಪಂಚಾಯತಿ ವ್ಯವಸ್ಥೆಯಲ್ಲಿ ತರಬುದಾದ ಮತ್ತಷ್ಟು ಸುಧಾರಣೆಗಳನ್ನು ಸೂಚಿಸುವ ನೀಲಿನಕ್ಷೆಯನ್ನು ಒಳಗೊಂಡ ಕರ್ನಾಟಕ ಸ್ವರಾಜ್ಯ ಚಾರ್ಟರ್ ರೂಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಈ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ಮಹತ್ವಯುತ ನಿರ್ಧಾರಗಳನ್ನು ʼಕರ್ನಾಟಕ ಪಂಚಾಯತ್ ರಾಜ್ ಘೋಷಣೆʼ ಎನ್ನಲಾಗುವುದು ಎಂದು ಸಚಿವರು ಪ್ರಕಟಿಸಿದರು.
ಸಚಿವರು ಈ ಸಂಬಂಧದ ಲೋಗೋ ಅನಾವರಣಗೊಳಿಸಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಕಾರ್ಯಗಳಿಂದ ಸ್ಫೂರ್ತಿ ಪಡೆದು ಸತ್ಯ (ಸತ್ಯ), ಅಹಿಂಸಾ (ಅಹಿಂಸೆ), ಅಸ್ತೇಯ (ಪ್ರಾಮಾಣಿಕತೆ) ಮತ್ತು ಮೈತ್ರಿ (ಭ್ರಾತೃತ್ವ) ತತ್ವಗಳನ್ನು ಆಧರಿಸಿ ರಾಷ್ಟ್ರೀಯ ಸ್ವರಾಜ್ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದ ಮಹದುದ್ದೇಶವು ಭಾರತ ದೇಶವು ತಾರತಮ್ಯ ಮತ್ತು ಹಿತಾಸಕ್ತಿಗಳ ಘರ್ಷಣೆಯ ಆಧಾರದ ಮೇಲೆ ನಿರ್ಮಿತವಾಗಿಲ್ಲ; ಬದಲಿಗೆ ಮಾನವನಿಷ್ಟ ಭಾರತೀಯತೆ ತತ್ವದ ಆಧಾರದ ಮೇಲೆ ಬಲಿಷ್ಠವಾಗಿ ನೆಲೆ ನಿಂತಿದೆ ಎನ್ನುವುದನ್ನು ಪ್ರತಿಪಾದಿಸುವುದಾಗಿರುತ್ತದೆ ಎಂದು ವಿವರಿಸಿದರು.
ಮೂರುದಿನಗಳ ಕಾರ್ಯಕ್ರಮದಲ್ಲಿ ನೀತಿನಿರೂಪಕರು, ಶಿಕ್ಷಣತಜ್ಞರನ್ನು ಒಳಗೊಂಡಂತೆ ಶೈಕ್ಷಣಿಕ ಅಧಿವೇಶನಗಳು, ಗಾಂಧೀಜಿಯವರ ತತ್ವಗಳು ಮತ್ತು ಭಾರತೀಯ ಸಂವಿಧಾನದಲ್ಲಿ ಹುದುಗಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಮೌಲ್ಯಗಳನ್ನು ಆಧರಿಸಿ ವಿಷಯಾಧಾರಿತ ಚರ್ಚೆಗಳು, ಪ್ರಸ್ತುತ ನಮ್ಮ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳಿಗೆ ಪರಿಹಾರ, ದುಂಡುಮೇಜಿನ ಚರ್ಚೆಗಳು ನಡೆಯಲಿವೆ ಎಂದು ಸಚಿವರು ಹೇಳಿದರು.
ಸಮಾಜೋ-ಸಾಂಸ್ಕೃತಿಕ ವೇದಿಕೆಯಲ್ಲಿ ಭಾರತದ ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ರಂಗಭೂಮಿ, ಸಾಂಪ್ರದಾಯಿಕ ಕಲೆ ಮತ್ತು ಚಲನಚಿತ್ರಗಳ ಪ್ರದರ್ಶನ, ಚರಕ ತರಗತಿಗಳು ಮತ್ತು ಧ್ಯಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಸಂವಿಧಾನದ 75 ವರ್ಷಗಳ ಅವಧಿಯಲ್ಲಿ ಕಂಡ ಪ್ರಗತಿ, ಅಭಿವೃದ್ಧಿ ಹಾಗೂ ಸವಾಲುಗಳ ಚಿತ್ರಣವನ್ನು ಪ್ರತಿಬಿಂಬಿಸುವ ಪೇಂಟಿಂಗ್ಸ್, ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಒಳಗೊಂಡ ವಸ್ತುಪ್ರದರ್ಶನ ಆಯೋಜಿಸಲಾಗುವುದು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪೂರ್ವಭಾವಿಯಾಗಿ ಸಮ್ಮೇಳನ ಕುರಿತಂತೆ ಅರಿವು ಮೂಡಿಸುವ ಸಲುವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಚಿತ್ರಗಳ ಆರೋಹಣ, ಜಿಲ್ಲಾ ಮಟ್ಟದಲ್ಲಿ ಉಪನ್ಯಾಸಗಳು ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಮುಂದುವರೆದಂತೆ 2025ರ ಆದ್ಯಂತ ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದ ಹಾಗೂ ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಮೌಲ್ಯಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು- ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಮತ್ತು ನೀತಿ ಕುರಿತ ಕೋರ್ಸ್, ಮಹಾತ್ಮಗಾಂಧಿ ಫೆಲೋಶಿಪ್, ಸಂವಿಧಾನ ಮ್ಯೂಸಿಯಂ ಸ್ಥಾಪನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಪ್ರಕಟಿಸಿದರು.
ಸಿಎಂ ಪತ್ನಿಯಿಂದ 14 ನಿವೇಶನಗಳನ್ನು ವಾಪಸ್ ಪಡೆದ ‘ಮೂಡಾ ಆಯುಕ್ತ’ರನ್ನು ಕೂಡಲೇ ಬಂಧಿಸಿ: HDK ಆಗ್ರಹ
ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ