ಬೆಂಗಳೂರು: ರಂಜಾನ್ ಮಾಹೆಯಲ್ಲಿ ರಾಜ್ಯದ ಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲಾ ಅವಧಿಯನ್ನು ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ನಿರ್ದೇಶನವಿರುತ್ತದೆ. ಅದರಂತೆ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ ವೇಳಾ ಪಟ್ಟಿಯಲ್ಲಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿಪಡಿಸಲಾಗಿರುತ್ತದೆ ಎಂದಿದ್ದಾರೆ.

ಸರ್ಕಾರದ ಪತ್ರದಲ್ಲಿ ರಂಜಾನ್ ಮಾಸದ ಪ್ರಯುಕ್ತ ರಾಜ್ಯದಲ್ಲಿನ ಉರ್ದು ಮಾಧ್ಯಮದ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.45 ರವರೆಗೆ ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ಒಂದು ತಿಂಗಳವರೆಗೆ ಮಾತ್ರ ನಡೆಸಲು ಈ ಹಿಂದೆ ದಿನಾಂಕ:31.10.2002 ರಲ್ಲಿ ಹೊರಡಿಸಲಾಗಿದ್ದ ಸ್ಟ್ಯಾಂಡಿಂಗ್ ಆರ್ಡರ್ ( Standing Order ) ನ್ನು ಯಥಾವತ್ತು ಹೊರಡಿಸಲು ಸ್ವೀಕೃತವಾದ ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಈ ಬಗ್ಗೆ ಕಛೇರಿಗೆ ಸಲ್ಲಿಸಲಾಗಿರುವ ಮನವಿಗಳನ್ನು ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ.

1) 2023-24ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಹಾಗೂ ಅನುದಾನರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ದಿನಾಂಕ:10.04.2024ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯ ಬದಲಾವಣೆಯ ವಿವರಗಳು: ಬೆಳಿಗ್ಗೆ 8.00 ಗಂಟೆಯಿಂದ 8.40ರವರೆಗೆ
8.40 ರಿಂದ 9.20 ರವರೆಗೆ
9.20 ರಿಂದ 10.00 ರವರೆಗೆ
10.00 ರಿಂದ 10.15 ರವರೆಗೆ ವಿರಾಮ
10.15 ರಿಂದ 10.55 ರವರೆಗೆ
10.55 ರಿಂದ 11.35 ರವರೆಗೆ
11.35 ರಿಂದ 12.10 ರವರೆಗೆ
12.10 ರಿಂದ 12.45 ರವರೆಗೆ
2) ಈ ವ್ಯವಸ್ಥೆಯಿಂದ ಶಾಲೆಗಳ ಕೆಲಸದ ಅವಧಿಯಲ್ಲಿ ಕಡಿಮೆ ಆಗುವ ಅವಧಿಯನ್ನು ಇತರೆ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಸರಿದೂಗಿಸಿಕೊಳ್ಳತಕ್ಕದ್ದು.
3) ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ರಂಜಾನ್ ಮಾಹೆಯಲ್ಲಿ ಉಪವಾಸ ವೃತವನ್ನು ಕೈಗೊಳ್ಳುವುದರಿಂದ ಅವರುಗಳಿಗೆ ರಂಜಾನ್ ಮಾಹೆಯಲ್ಲಿ ಪ್ರತಿದಿನ ಸಂಜೆ ಅರ್ಧ ಗಂಟೆ ಮುಂಚಿತವಾಗಿ ತೆರಳಲು ಅನುಮತಿಸಬಹುದು.
4)2023-24ನೇ ಸಾಲಿಗೆ ನಿಗದಿಪಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕೆ.ಎಸ್.ಕ್ಯೂ.ಎ.ಎ.ಸಿ ವತಿಯಿಂದ ನಡೆಸಲಾಗುತ್ತಿರುವ ಸಂಕಲನಾತ್ಮಕ ಮೌಲ್ಯಾಂಕನ (SA-2) ವೇಳಾಪಟ್ಟಿಯಂತೆ 5ನೇ, 8ನೇ ಹಾಗೂ 9ನೇ ತರಗತಿಯ ಪರೀಕ್ಷಾ ಕಾರ್ಯ ನಡೆಸುವಂತೆ ಕ್ರಮವಹಿಸುವುದು.
5) 2023-24ನೇ ಸಾಲಿಗೆ ನಿಗದಿಪಡಿಸಿರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರ ಮತ್ತು ಪರೀಕ್ಷಾ ಕರ್ತವ್ಯ ನಿರತ ಉರ್ದು ಮಾಧ್ಯಮದ ಶಿಕ್ಷಕರಿಗೆ ಈ ಆದೇಶವು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

Share.
Exit mobile version