ಬೆಂಗಳೂರು : ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಏನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಅವರ ಪತ್ನಿಗೂ ಕೂಡ ಸೈಟ್ ಹಂಚಿಕೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ನಾನು ಯಾಕಪ್ಪ ರಾಜೀನಾಮೆ ಕೊಡಬೇಕು?ಇದರಲ್ಲಿ ನನ್ನ ಪಾತ್ರ ಏನಿದೆ? ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮುಡಾ ಅಕ್ರಮದ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಯಾಕೆ ಸಿಬಿಐ ತನಿಖೆಗೆ ಕೊಡಬೇಕು? ಬಿಜೆಪಿ ಸರ್ಕಾರದ ಅವಧಿಯಲ್ಲೆ ಸೈಟ್ ಹಂಚಿಕೆ ಮಾಡಿದ್ದು. ಈಗ ದುರುಪಯೋಗ ಆಗಿದೆ ಅಂತ ಆರೋಪ ಮಾಡಿದ್ದಾರೆ. ದುರುಪಯೋಗ ಆಗಿದೆಯಾ ಇಲ್ವಾ ಅಂತ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಯಾರ ಅವಧಿಯಲ್ಲಿ ಸೈಟ್ ಹಂಚಿಕೆ ಆಯಿತು ಅವರನ್ನು ವರ್ಗಾವಣೆ ಮಾಡಲಾಗಿದೆ. ತನಿಖೆ ಮಾಡಲು ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಿದ್ದೇವೆ. ನಾನು ಯಾಕಪ್ಪಾ ರಾಜೀನಾಮೆ ಕೊಡಬೇಕು? ನನ್ನ ಪಾತ್ರ ಏನಿದೆ? ಅಶೋಕ್ ರಾಜೀನಾಮೆ ಕೇಳುತ್ತಾನೆ ಅಂತ ಕೊಡಲು ಆಗುತ್ತಾ? ಅವರ ಕಾಲದಲ್ಲೇ ಅಕ್ರಮ ಸಕ್ರಮ ಆಗಿಲ್ಲವೆಂದು ಬೇಲ್ ಪಡೆದಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ವಾಲ್ಮೀಕಿ ನಿಗಮದ ವ್ಯವಹಾರದ ಬಗ್ಗೆ ಎಸ್ಐಟಿಗೆ ಕೊಟ್ಟಿದ್ದೇವೆ. ವಾಲ್ಮೀಕಿ ನಿಗಮ ಆಕ್ರಮ ಬಗ್ಗೆ ಎಸ್ಐಟಿಯವರು ತನಿಖೆ ಮಾಡುತ್ತಿದ್ದಾರೆ. ನಾಗೇಂದ್ರ ಅವರಿಂದಲೂ ರಾಜಿನಾಮೆ ಕೊಡಿಸಿದ್ದೇವೆ. ಎಂಡಿಗೆ ಮೌಖಿಕ ಸೂಚನೆ ಕೊಟ್ಟರು ಅಂತ ರಾಜೀನಾಮೆ ಕೊಡಿಸಿದ್ದೇವೆ. ಬಿಜೆಪಿಯವರಿಗೆ ಏನು ವಿಷಯ ಇಲ್ಲ ಅದಕ್ಕೆ ಇದನ್ನು ಹಿಡಿದುಕೊಂಡಿದ್ದಾರೆ. ತನಿಖೆ ವರದಿ ಬಂದ ಮೇಲೆ ತಾನೆ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Share.
Exit mobile version