ಬೆಂಗಳೂರು: ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭ ಸದನವು ಅಂಗೀಕರಿಸಿದ ಪ್ರಸ್ತಾವದ ಲೋಪ ಬಗ್ಗೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಕ್ರಮ ಏಕಿಲ್ಲ ಅಂತ ಪ್ರಶ್ನಿಸಿದ್ದಾರೆ.
ಈ ಬಗ್ಗೆ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಪತ್ರ ಬರೆದಿದ್ದಾರೆ. ಅದರಲ್ಲಿ ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭ 21-03-2025 ರಂದು ಸದನದಲ್ಲಿ ಮಾನ್ಯ ಮಾನ್ಯ ಕಾನೂನು ಮತ್ತು ಸಂಸದೀಯ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಮಂಡಿಸಿದ ಪ್ರಸ್ತಾವನೆಯ ಮೇಲೆ ಭಾರತೀಯ ಜನತಾ ಪಕ್ಷದ 18 ವಿಧಾನಸಭಾ ಸದಸ್ಯರನ್ನು ಸದನದಿಂದ 6 ತಿಂಗಳ ಕಾಲ ಅಮಾನತ್ತುಗೊಳಿಸಿರುವುದು ಸರಿಯಾದ ಕ್ರಮವಾಗಿರುತ್ತದೆ ಎಂದಿದ್ದಾರೆ.
ಆದರೆ ಸದರಿ ಪ್ರಸ್ತಾವನೆಯನ್ನು ಅಂಗೀಕರಿಸುವ ಸಂದರ್ಭದಲ್ಲಿ ಸದನದಲ್ಲಿ ನಡೆದ ಬಿಜೆಪಿಯ ನಿಯೋಜಿತ ಗಲಬೆ ಮತ್ತು ಸದನಕ್ಕೆ ಅಗೌರವ ತೋರಲು ಪ್ರಚೋದನೆ ಮಾಡಿದ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಒಂದು ಲೋಪವಾಗಿರುತ್ತದೆ ಎಂಬುದಾಗಿ ಹೇಳಿದ್ದಾರೆ.
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮತ್ತು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳಿಗೆ ಅನುಗುಣವಾಗಿ ವಿಧಾನಸಭೆಯ ಯಾವುದೇ ಸದಸ್ಯರು ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ನೀಡುವ ರೀತಿಯಲ್ಲಿ ಅಥವಾ ಅಶಿಸ್ತಿನಿಂದ ನಡೆದುಕೊಳ್ಳಲು, ಕಾರ್ಯ ಕಲಾಪಗಳಿಗೆ ದುರುದ್ದೇಶದಿಂದ ಅಡ್ಡಿಪಡಿಸಲು ಅವಕಾಶ ಇರುವುದಿಲ್ಲ ಎಂದಿದ್ದಾರೆ.
ಕರ್ನಾಟಕದ ವಿಧಾನಸಭೆಯು ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಇತರೆ ರಾಜ್ಯಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಮಾದರಿಯಾಗಿರುತ್ತದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ 24-02-2021 ರಂದು ಅಂದಿನ ಸಭಾಧ್ಯಕ್ಷರು ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ ಕಾರ್ಯಾಗಾರವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಸಿದ್ದರು. ಈ ಕಾರ್ಯಾಗಾರದ ನಂತರ ಕರ್ನಾಟಕದ ಬಿಜೆಪಿ ಶಾಸಕರು ಮತ್ತು ನಾಯಕರು ಸಂಸದೀಯ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆಂದು ರಾಜ್ಯದ ಜನ ಭಾವಿಸಿದ್ದರು ಎಂದು ಹೇಳಿದ್ದಾರೆ.
21-03-2025 ರಂದು ಸದನದಲ್ಲಿ ಸಭಾಧ್ಯಕ್ಷರ ಪೀಠವನ್ನು ಸುತ್ತುವರೆದು ಸಭಾಧ್ಯಕ್ಷರ ವಿರುದ್ಧ ಅಶಿಸ್ತಿನಿಂದ ನಡೆದುಕೊಂಡ ಮತ್ತು ಸದನದ ಘನತೆ ಗೌರವಕ್ಕೆ ಚ್ಯುತಿಯನ್ನು ತಂದಿರುವ ಭಾರತೀಯ ಜನತಾ ಪಕ್ಷದ ವಿಧಾನಸಭಾ ಸದಸ್ಯರಿಗೆ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು ಪ್ರಚೋದನೆ ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.
ಒಬ್ಬ ವಿರೋಧ ಪಕ್ಷದ ನಾಯಕರಾಗಿ ಸದನದ ಪೀಠಕ್ಕೆ ನುಗ್ಗುವಂತೆ ಪ್ರಚೋದಿಸುವ ಅವರ ಹೇಳಿಕೆ ಮಾಧ್ಯಮಗಳಲ್ಲಿ ಬಹಳ ಸ್ಪಷ್ಟವಾಗಿ ದಾಖಲಾಗಿರುತ್ತದೆ. ಒಬ್ಬ ವಿರೋಧ ಪಕ್ಷದ ನಾಯಕರಾಗಿ ಸದನದ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯಬೇಕಾಗಿದ್ದ ಹಾಗೂ ಸಭಾಧ್ಯಕ್ಷರ ಪೀಠಕ್ಕೆ ಗೌರವ ನೀಡಬೇಕಾಗಿದ್ದ ಇವರೇ ನಿಯಮಗಳನ್ನು ಮೀರಿ ಇಡೀ ಘಟನಾವಳಿಗೆ ಕಾರಣಕರ್ತರಾಗಿರುತ್ತಾರೆ ಎಂದು ಆರೋಪಿಸಿದ್ದಾರೆ.
ಸಧನವು ಶಿಸ್ತುಕ್ರಮದ ಪ್ರಸ್ತಾವನೆಯನ್ನು ಮಂಡಿಸುವ ಸಂದರ್ಭದಲ್ಲಿ ಇವರ ಹೆಸರನ್ನು ಪರಿಗಣಿಸದೆ ಇರುವುದು ಸರಿ ಅಲ್ಲವೆಂದು ಮತ್ತು ಲೋಪದಿಂದ ಕೂಡಿದೆ ಎಂದು ಜನಸಾಮಾನ್ಯರು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ತಮ್ಮ ಅನಿಸಿಕೆಯನ್ನು ಹೇಳುತ್ತಿದ್ದಾರೆ ಎಂದಿದ್ದಾರೆ.
ತಾವು ದಯಮಾಡಿ ವಿಧಾನಸಭೆಯ ನಡವಳಿಕೆಗಳ ನಿಯಮಾವಳಿ 348 ರ ಅಡಿಯಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರ ಮೇಲೂ ಶಿಸ್ತುಕ್ರಮ ಕೈಗೊಂಡು, ಇವರನ್ನೂ ಸಹ ತಕ್ಷಣದಿಂದ ಜಾರಿಗೆ ಬರುವಂತೆ ಸದನದಿಂದ ಅಮಾನತುಗೊಳಿಸಬೇಕಾಗಿ ಕೋರಿದ್ದಾರೆ.
ಇನ್ನೂ ದಿನಾಂಕ 21-03-2025 ರಂದು ಸದನ ಅಂಗೀಕರಿಸಿರುವ ಪ್ರಸ್ತಾವದಲ್ಲಿ ಆಗಿರಬಹುದಾದ ತಪ್ಪನ್ನು ಸರಿಪಡಿಸಿ, ಸದನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಲು ಮತ್ತು ಸದಸ್ಯರ ಅಶಿಸ್ತನ್ನು ಮೊಟಕುಗೊಳಿಸಲು ಅಶಿಸ್ತಿನಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ಶಿಸ್ತುಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.
ಸೊರಬ – ಹಾನಗಲ್ ನೂತನ ಮಾರ್ಗದ ಬಸ್ ಸಂಚಾರಕ್ಕೆ ‘ಸಚಿವ ಮಧು ಬಂಗಾರಪ್ಪ’ ಚಾಲನೆ
ನಾಗ್ಪುರ ಹಿಂಸಾಚಾರ: ಮತ್ತೆ 14 ಮಂದಿ ಬಂಧನ, ಬಂಧಿತರ ಸಂಖ್ಯೆ 105ಕ್ಕೆ ಏರಿಕೆ, 3 ಹೊಸ FIR ದಾಖಲು | Nagpur violence