ಬೆಂಗಳೂರು: ಗರ್ಭಿಣಿ ಮಹಿಳೆಯರಿಗೆ ಲಿಂಗ ಪತ್ತೆ ಪರೀಕ್ಷೆ ಎಲ್ಲೆಡೆ ನಿಷೇಧವಿದೆ. ಹೀಗಿದ್ದರೂ ರಾಮನಗರ ಜಿಲ್ಲಾಸ್ಪತ್ರೆಯಲ್ಲೇ ಗರ್ಭಿಣಿ ಮಹಿಳೆಯೊಬ್ಬರಿಗೆ ಲಿಂಗಪತ್ತೆ ಪರೀಕ್ಷೆ ನಡೆಸಿ, ಆಕೆ ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾದಂತ ರೇಡಿಯಾಲಜಿಸ್ಟ್ ಡಾ.ಶಶಿ ಎಸ್.ಎಲ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.
ಇಂದು ಈ ಕುರಿತು ಆರೋಗ್ಯ ಮತ್ತು ಕುಟುಂಬ ಸೇವೆಗಳ ಶಿಸ್ತು ಪ್ರಾಧಿಕಾರ ಹಾಗೂ ಆಯುಕ್ತರಾದಂತ ಶಿವಕುಮಾರ್.ಕೆಪಿ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಹರ್ಷಿತಾ w/o ಚನ್ನಕೇಶವ, ವಯಸ್ಸು 26 ವರ್ಷಗಳು ತೀವ್ರವಾದ ರಕ್ತಸ್ರಾವದಿಂದ ವಾಣಿ ವಿಲಾಸ ಆಸ್ಪತ್ರೆಯಲ್ಲಿ OBG unit D ನಲ್ಲಿ ದಾಖಲಾಗಿರುತ್ತಾರೆ. ಸದರಿ ಪ್ರಕರಣದ ಕುರಿತು ಅನುಮಾನ ಉಂಟಾಗಿ, ಗುಪ್ತ ಮಾಹಿತಿಯೊಂದಿಗೆ ವಿಚಾರಣೆಯ ಸಲುವಾಗಿ ದಿನಾಂಕ: 23-08-2025 ರಂದು ಮಧ್ಯಾಹ್ನ 3.00 ಗಂಟೆಗೆ ಉಪನಿರ್ದೇಶಕರು, ಪಿ.ಸಿ & ಪಿ.ಎನ್.ಡಿ.ಟಿ. ಹಾಗೂ ತಂಡ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಸಕ್ಷಮ ಪ್ರಾಧಿಕಾರದ ಪರವಾಗಿ ಡಾ. ರವೀಂದ್ರನಾಥ ಮೇಟಿ, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಡಾ. ಸಿರಾಜುವುದ್ದೀನ್ ಮದನಿ, ವಾಣಿ ವಿಲಾಸ ಆಸ್ಪತ್ರೆಯ ಆರ್.ಎಂ.ಓ ವೈದ್ಯರಾದ ಡಾ.ಸಂತೋಷ್ ಹಾಗೂ ಸಹಾಯಕ ಪ್ರಾಧ್ಯಾಪಕರು ಡಾ. ಉಮಾಶಂಕರ್‌ರವರೊಂದಿಗೆ ವಾಣಿ ವಿಲಾಸ ಆಸ್ಪತ್ರೆಗೆ ಭೇಟಿ ನೀಡಿರುತ್ತಾರೆ.
ವಿಚಾರಣೆಯ ಸಮಯದಲ್ಲಿ ಹರ್ಷಿತಾ W/o ಚನ್ನಕೇಶವ ಇವರು 4 ರಿಂದ 5 ತಿಂಗಳ ಗರ್ಭಿಣಿಯಾಗಿದ್ದು, ಈಗಾಗಲೇ ತಮಗೆ ಎರಡು ಹೆಣ್ಣು ಮಕ್ಕಳು ಇರುವುದರಿಂದ ಮೂರನೆಯ ಮಗು ಯಾವುದೆಂದು ತಿಳಿಯಲು ಲಕ್ಷ್ಮೀ ಎಂಬ ತಮ್ಮ ಸಂಬಂಧಿಕರಲ್ಲಿ ವಿಚಾರಿಸಲಾಗಿ, ಅವರು ಭ್ರೂಣ ಲಿಂಗ ಪತ್ತೆ ಮಾಡುವ ರೇಡಿಯಾಲಜಿಸ್ಟ್ ಪರಿಚಯವಿರುವ ಶಾರದಮ್ಮ ಎಂಬ ಮಧ್ಯವರ್ತಿಯು ಗೊತ್ತಿರುವುದಾಗಿ ತಿಳಿಸಿ, ಅವರ ಸಹಾಯದಿಂದ ಸದರಿಯವರನ್ನು ಜಿಲ್ಲಾ ಆಸ್ಪತ್ರೆ, ರಾಮನಗರಕ್ಕೆ ದಿನಾಂಕ 23-08-2025ರ ಬೆಳಗ್ಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ತದನಂತರದಲ್ಲಿ ‘server busy’ ಇದೆ ಎಂದು ಹಿಂದಿರುಗಲು ತಿಳಿಸಿದ್ದು, ಆದರೆ ಮಧ್ಯಾಹ್ನ ಸುಮಾರು 2.00 ಗಂಟೆಯೊಳಗೆ ಜಿಲ್ಲಾ ಆಸ್ಪತ್ರೆ, ರಾಮನಗರಕ್ಕೆ ಬರಲು ಭಾಗ್ಯ ಎಂಬ ಮಧ್ಯವರ್ತಿಯು ದೂರವಾಣಿ ಮುಖಾಂತರ ಹೇಳಿರುವುದಾಗಿ ತಿಳಿಸಿರುತ್ತಾರೆ. ಅದರಂತೆ ಅವರು ಪುನಃ ಜಿಲ್ಲಾ ಆಸ್ಪತ್ರೆ ರಾಮನಗರ ಇಲ್ಲಿಗೆ ಹೋದಾಗ ಅವರ ಎಡಗೈ ಮೇಲೆ ಶಾರದಮ್ಮ ಎಂಬ ಹೆಸರನ್ನು ನಮೂದಿಸಿರುವುದಾಗಿ, ಇದನ್ನು ಪರಿಶೀಲಿಸಿದ ವೈದ್ಯರು ಹರ್ಷಿತಾ W/o ಚನ್ನಕೇಶವ ಇವರಿಗೆ ಸ್ಕ್ಯಾನಿಂಗ್ ಮಾಡಿ ಮಗು ಚೆನ್ನಾಗಿದೆಯೆಂದು ತಿಳಿಸಿರುವುದಾಗಿ ಹೇಳಿಕೆ ನೀಡಿರುತ್ತಾರೆ.
ತದನಂತರದಲ್ಲಿ ಹರ್ಷಿತಾ W/o ಚನ್ನಕೇಶವ ಇವರ ಸಂಬಂಧಿಕರಾದ ಲಕ್ಷ್ಮೀ ಇವರಿಂದ ಶಾರದ ಎಂಬ ಮಧ್ಯವರ್ತಿಯ ಗಂಡ ರೂ. 19000/- ಗಳನ್ನು ಪಡೆದು, ಹಣ್ಣು ಮಗು ಎಂದು ತಿಳಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಇದನ್ನು ತಿಳಿದ ಹರ್ಷಿತಾ W/o ಚನ್ನಕೇಶವ ಇವರು ಭಾಗ್ಯ ಎಂಬ ಮಧ್ಯವರ್ತಿಯ ಸಹಾಯದಿಂದ ಡ್ಯಾನಿಷ್ ಪಾಲಿಕ್ಲಿನಿಕ್, ಬಾಪೂಜಿ ನಗರ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್‌ನಿಲ್ದಾಣ, ಬೆಂಗಳೂರು ಹತ್ತಿರ ಇಲ್ಲಿ ಭ್ರೂಣ ಹತ್ಯೆ ಮಾಡಲು ಕರೆದುಕೊಂಡು ಹೋಗಿರುವುದಾಗಿ ಹಾಗೂ ಗರ್ಭಪಾತ ಮಾಡಿಸಲು ಮಾತ್ರೆಯನ್ನು ನೀಡಿರುವುದಾಗಿ ತಿಳಿಸಿರುತ್ತಾರೆ. ತೀವ್ರವಾದ ರಕ್ತಸ್ರಾವವಾಗುತ್ತಿದ್ದ ಹರ್ಷಿತಾ W/o ಚನ್ನಕೇಶವ ಇವರನ್ನು ಪರಿಶೀಲಿಸಿದ ಬನಶಂಕರಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ವಾಣಿವಿಲಾಸ್ ಆಸ್ಪತ್ರೆಗೆ ಕಳುಹಿಸಿರುತ್ತಾರೆ ಇದರಿಂದ ಪ್ರಕರಣ ಬೆಳಕಿಗೆ ಬಂದಿರುತ್ತದೆ.
ಈ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ ರಾಜ್ಯ ಸಕ್ಷಮ ಪ್ರಾಧಿಕಾರ ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರ, ರಾಮನಗರ ತಂಡವು ಮುಂದಿನ ತನಿಖೆಗಾಗಿ ದಿನಾಂಕ 25-08-2025 ರಂದು ಜಿಲ್ಲಾ ಆಸ್ಪತ್ರೆ, ರಾಮನಗರ ಜಿಲ್ಲೆ ಇಲ್ಲಿಗೆ ಭೇಟಿ ನೀಡಿ ಸ್ಕ್ಯಾನಿಂಗ್ ಮೆಷಿನ್ ನನ್ನು ಪರಿಶೀಲಿಸಿದಾಗ ದಿನಾಂಕ: 23-08-2025 ರಂದು ಸುಮಾರು 3.37 ರ ಸಮಯದಲ್ಲಿ ಶ್ರೀಮತಿ ಹರ್ಷಿತಾ ಇವರು ಸ್ಕ್ಯಾನಿಂಗ್ ಮಾಡಿಸಿರುವುದು ದೃಢಪಟ್ಟಿರುತ್ತದೆ.
ಹರ್ಷಿತಾರವರು ಮುಂಚಿತವಾಗಿಯೇ ಯಾವುದೇ ಪರೀಕ್ಷೆಗಾಗಿ ದಿನಾಂಕವನ್ನು ನಿಗಧಿಪಡಿಸಿಕೊಂಡಿರುವುದಿಲ್ಲ ಹಾಗೂ ಕೆಲವೊಂದು ಎಫ್-ಫಾರಂಗಳನ್ನು ಪರೀಕ್ಷಿಸಿದಾಗ ಶಿವರಂಜನಿ, ಕನಕಪುರ ತಾಲ್ಲೂಕು ರಾಮನಗರ, 16 ವಾರಗಳು ಹಾಗೂ ಆಷಿಯಾ ಬಾನು, ರಾಮನಗರ 9 ವಾರಗಳು ಗರ್ಭಪಾತವಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.
ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 19570 ನಿಯಮ 10 (3)00 ಕೂಲಂಕುಷವಾಗಿ ಪರಿಶೀಲಿಸಿದ್ದು, ವೈದ್ಯರು ಪಿ.ಸಿ.ಪಿ.ಎನ್.ಡಿ.ಟಿ., ಕಾಯ್ದೆ 1994 ಮತ್ತು ತಿದ್ದುಪಡಿ ಕಾಯ್ದೆ 2002ರ ನಿಯಮ 6 ಮತ್ತು 17ನ್ನು ಉಲ್ಲಂಘಿಸಿರುವುದು ವರದಿಯಿಂದ ಸ್ಪಷ್ಟವಾಗಿರುತ್ತದೆ. ಹರ್ಷಿತಾ W/o ಚನ್ನಕೇಶವ ಇವರು ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದುದರಿಂದ ಮೂರನೇ ಮಗು ಯಾವುದೆಂದು ತಿಳಿಯಲು ಜಿಲ್ಲಾ ಆಸ್ಪತ್ರೆ, ರಾಮನಗರಕ್ಕೆ ತೆರಳಿದ್ದು, ಸ್ಕ್ಯಾನಿಂಗ್ ಮೆಷಿನ್‌ನನ್ನು ಉಪಯೋಗಿಸಲು ತಜ್ಞತೆಯುಳ್ಳ ವೈದ್ಯರಿಂದ ಮಾತ್ರ ಭ್ರೂಣ ಲಿಂಗ ಪತ್ತೆ ಹಚ್ಚಲು ಅವಕಾಶವಿರುವ ವೈದ್ಯರಿಂದ ತಪಾಸಣೆ ಮಾಡಿಸಿರುವುದು ಹಾಗೂ ಸ್ಕ್ಯಾನಿಂಗ್ ನಂತರದಲ್ಲಿ ಬೆಂಗಳೂರಿನಲ್ಲಿ ಗರ್ಭಪಾತ ಮಾಡಿಸಿಕೊಂಡಿರುವುದು ಜಿಲ್ಲಾ ಆಸ್ಪತ್ರೆ, ರಾಮನಗರ ಇಲ್ಲಿ ಹೆಣ್ಣು ಮಗು ಎಂದು ಭ್ರೂಣ ಲಿಂಗ ಪತ್ತೆ ಮಾಡಿರುವುದರಿಂದಲೇ ಆಗಿರುತ್ತದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ.
ಆದುದರಿಂದ ರೇಡಿಯಾಲಜಿಸ್ಟ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ|| ಶಶಿ ಎಸ್.ಎಲ್., ಇವರನ್ನು ಜಿಲ್ಲಾ ಆಸ್ಪತ್ರೆ, ರಾಮನಗರ ಇಲ್ಲಿಯೇ ಮುಂದುವರೆಸಿದಲ್ಲಿ ಪ್ರಕರಣದ ಹೆಚ್ಚಿನ ತನಿಖೆಗೆ/ಇಲಾಖಾ ವಿಚಾರಣೆಗೆ ಅಡ್ಡಿ ಉಂಟುಮಾಡುವ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಹಾಗೂ ಸಾಕ್ಷಿ ಪುರಾವೆಗಳನ್ನು ನಾಶಗೊಳಿಸುವ ಸಾಧ್ಯತೆಗಳಿರುವುದರಿಂದ, ಪ್ರಕರಣದ ನಿಷ್ಪಕ್ಷಪಾತವಾದ ತನಿಖೆಗೆ ಅನುಕೂಲವಾಗಲು ಸದರಿಯವರನ್ನು ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವಾಗಿರುತ್ತದೆ ಎಂದು ನಿರ್ಣಯಿಸಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ ಶಿವಕುಮಾರ್ ಕೆ.ಬಿ., ಭಾ.ಆ.ಸೇ., ಆಯುಕ್ತರು, ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಆದ ನಾನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957 ರ ನಿಯಮಗಳ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಡಾ|| ಶಶಿ ಎಸ್.ಎಲ್., ರೇಡಿಯಾಲಜಿಸ್ಟ್ ಜಿಲ್ಲಾ ಆಸ್ಪತ್ರೆ, ರಾಮನಗರ ಜಿಲ್ಲೆ ಇವರನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10 (1)(ಡಿ)ರಡಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿರುತ್ತೇನೆ. ಸದರಿ ವೈದ್ಯರು ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ ಎಂದು ತಿಳಿಸಿದೆ ಹಾಗೂ ಜೀವನಾಂಶ ಭತ್ಯೆಯನ್ನು ಸೆಳೆಯುವ ಸಲುವಾಗಿ ಸದರಿಯವರ ಲೀನ್ ಅನ್ನು ಸಾರ್ವಜನಿಕ ಆಸ್ಪತ್ರೆ ಚಿಂಚೋಳಿ, ಕಲಬುರಗಿ ಜಿಲ್ಲೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ.
ಭೂಕಂಪ ಪೀಡಿತ ಆಫ್ಘಾನ್ ಸಂತ್ರಸ್ತರಿಗೆ ಭಾರತದಿಂದ ನೆರವು: 1000 ಫ್ಯಾಮಿಲಿ ಟೆಂಟ್ ಅಫ್ಘಾನಿಸ್ತಾನಕ್ಕೆ ರವಾನೆ