ಬೆಂಗಳೂರು: ವಯನಾಡು ಭೂ ಕುಸಿತ ದುರಂತದಲ್ಲಿ ಸಂತ್ರಸ್ತರಾದಂತ ಜನರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರು ಮನ ಮಿಡಿದಿದ್ದಾರೆ. ಬರೋಬ್ಬರಿ 9 ಅಗತ್ಯ ಪರಿಹಾರದ ಸಾಮಗ್ರಿಗಳ ಟ್ರಕ್ ಗಳ ಮೂಲಕ ರವಾನಿಸುತ್ತಿದ್ದಾರೆ. ಈ 9 ಪರಿಹಾರದ ಸಾಮಗ್ರಿಗಳನ್ನು ಹೊತ್ತು ತೆರಳುವಂತ ಟ್ರಕ್ ಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.
ಬಿಟಿಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಯನಾಡು ಮತ್ತು ಶಿರೂರು ಸಂಭವಿಸಿದ ಭೂಕುಸಿತದ ದುರಂತಕ್ಕೆ ಸ್ಪಂದಿಸಲು ಪರಿಹಾರ ಸಾಮಾಗ್ರಿಗಳ 9 ಟ್ರಕ್ ಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಈ ವೇಳೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತರಿದ್ದರು.
ವಯನಾಡು ಭೂಕುಸಿತ ಸ್ಥಳಕ್ಕೆ ಸ್ವತಃ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಪಯಣ, ಪರಿಹಾರ ಸಾಮಗ್ರಿ ವಿತರಣೆ
ಇನ್ನೂ ಟ್ರಕ್ ಗಳೊಂದಿಗೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಮತ್ತು ಬಿಬಿಎಂಪಿ ಮಾಜಿ ಮಹಾಪೌರರಾದಂತ ಮಂಜುನಾಥ್ ರೆಡ್ಡಿ ಮತ್ತು ಮಾಜಿ ಕಾರ್ಪೊರೇಟರ್ ನಾಗರಾಜು, ಮಂಜುನಾಥ್ ವಯನಾಡಿಗೆ ತೆರಳಲಿದ್ದಾರೆ. ಸ್ವತಃ ವಯನಾಡಿನಲ್ಲಿ ಸಂತ್ರಸ್ತರಾಗಿರುವಂತ ಜನರಿಗೆ ಪರಿಹಾರದ ಸಾಮಗ್ರಿಗಳನ್ನು ವಿತರಣೆ ಮಾಡಲಿದ್ದಾರೆ.
ಕರ್ನಾಟಕದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಪ್ರವಾಹದ ದುರಂತಕ್ಕೆ ನೂರಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ.
ಮಾನವೀಯ ನೆಲೆಯಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ 9 ಟ್ರಕ್ ಗಳಲ್ಲಿ ರೂ.1. 32 ಕೋಟಿ ಮೊತ್ತದಷ್ಟು ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲಾಯಿತು. ಸದರಿ ದುರಂತದಲ್ಲಿ ಮನೆಗಳನ್ನು ಹಾಗೂ ತಮ್ಮವರನ್ನು ಕಳೆದುಕೊಂಡಿರುವ ಜನರಿಗೆ ತಮ್ಮ ಕೈಲಾದಷ್ಟು ನೆರವು ನೀಡಿ ತಮ್ಮ ಅಳಿಲು ಸೇವೆಯಾಗಿದೆ.
9 ಟ್ರಕ್ ಗಳಲ್ಲಿ ಏನೇನು ಪರಿಹಾರ ಸಾಮಗ್ರಿ ರವಾನೆ?
ಇಂದು ಟ್ರಕ್ ನಲ್ಲಿ ಸೀರೆ, ಟಿ- ಶರ್ಟ್, ಟೂತ್ ಪೇಸ್ಟ್ / ಬ್ರಷ್, ಸೋಪು, ಬಿಸ್ಕತ್, ಅಕ್ಕಿ, ಬೇಳೆ ಕಾಳುಗಳು, ಸಾಂಬಾರ ಪದಾರ್ಥಗಳು, ಬಕೆಟ್, ಟಾರ್ಪಲಿನ್, ಟವೆಲ್, ಜಮಕಾನ, ಲೋಟ ತಟ್ಟೆಗಳು, ಎಣ್ಣೆ ಇತ್ಯಾದಿ ಅಗತ್ಯ ವಸ್ತುಗಳಿವೆ.
ವಯನಾಡಿನ ಭೀಕರತೆ, ಸಾವು ನೋವು ನೋಡಲು ಕಷ್ಟಸಾಧ್ಯವಾಗಿದೆ. ಅಗಲಿದ ಆತ್ಮಗಳಿಗೆ ಶಾಂತಿ ಕೋರುತ್ತಾ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಮನೆಯವರಿಗೆ ಆ ಭಗವಂತ ಕರುಣಿಸಲಿ. ಈ ಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ನಮ್ಮ ಕೈಲಾದ ಸೇವೆ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಕೊಡಗು, ಉತ್ತರ ಕನ್ನಡ ನೆರೆಗೂ ಮಿಡಿದಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಜನತೆ
ಬಿ.ಟಿ.ಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 2019 ರಲ್ಲಿಯೂ ಕೂಡ ಕೊಡಗು ಕೇರಳ ಪ್ರವಾಹ ದುರಂತಕ್ಕೆ 16 ಲಾರಿಗಳಲ್ಲಿ ರೂ.1 ಕೋಟಿ ವೆಚ್ಚದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿ ಕೊಡಲಾಗಿತ್ತು.
2020 ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಪ್ರವಾಹದ ದುರಂತದ ಸಮಯದಲ್ಲಿ ಸಹ 20 ಲಾರಿಗಳಲ್ಲಿ ರೂ. 1.25 ಕೋಟಿ ವೆಚ್ಚದ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲಾಗಿತ್ತು.
ಕೋವಿಡ್ ಸಂದರ್ಭದಲ್ಲೂ ಪರಿಹಾರ ಸಾಮಗ್ರಿ ವಿತರಣೆ
ಕೋವಿಡ್ನ ಸಮಯದಲ್ಲಿ ಪ್ರತಿದಿನ ಒಂದನೆ ಅಲೆ 50000 ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ 35000 ಜನರಿಗೆ ಉಚಿತವಾಗಿ ಊಟವನ್ನು ನೀಡಲಾಗಿತ್ತು ಅದರೊಂದಿಗೆ ಎರಡೂ ಅಲೆಗಳಲ್ಲಿ ಸುಮಾರು 120000 ಕಿಟ್ ಗಳನ್ನು ವಿತರಿಸಲಾಗಿತ್ತು. ಇದರೊಂದಿಗೆ ಹಾಲು, ಬ್ರೆಡ್, ಮೊಟ್ಟೆ ತರಕಾರಿಗಳನ್ನು ಉಚಿತವಾಗಿ ನೀಡಲಾಗಿತ್ತು.
ಈ ಸಂದರ್ಭದಲ್ಲಿ ಯು.ಬಿ.ವೆಂಕಟೇಶ್, ಮಾನ್ಯ ವಿಧಾನ ಪರಿಷತ್ ಸದಸ್ಯರು, ಕೃಷ್ಣಂರಾಜು, ಖಚಾಂಚಿ, ಕೆಪಿಸಿಸಿ, ಬಿ.ಮಲ್ಲಿಕಾರ್ಜುನ್, ಚಂದ್ರಪ್ಪ, ಆನಂದ್, ಮಂಜುಳಾ ಸಂಪತ್, ಬಿ.ಮೋಹನ್, ಗೋವರ್ಧನ ರೆಡ್ಡಿ, ಮುನಿರಾಜು, ವೆಂಕಟಸ್ವಾಮಿ, ಚಂದ್ರಪ್ಪನಗರ, ಮಂಜು, ಜಿಎನ್ಆರ್ ಬಾಬು ಸೇರಿದಂತೆ, ಇತರೆ ಮಾಜಿ ಪಾಲಿಕೆ ಸದಸ್ಯರುಗಳು, ಬ್ಲಾಕ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING : ಸಾಗರದಲ್ಲಿ ಹೊತ್ತಿ ಉರಿದ ಸರ್ಕಾರಿ ಬಸ್ : ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
ಗೃಹಲಕ್ಷ್ಮಿ ಹಣ ಖಾತೆಗೆ ಜಮಾ : ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ…!