ಗುವಾಹಟಿ: ಐಪಿಎಲ್ 2026ರಲ್ಲಿ ಸತತ ಗೆಲುವುಗಳೊಂದಿಗೆ ಅಬ್ಬರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ (RR) ತಂಡಕ್ಕೆ ಈಗ ಹೊಸ ವಿವಾದವೊಂದು ಸುತ್ತಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯದ ವೇಳೆ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ನಿಯಮ ಬಾಹಿರವಾಗಿ ಮೊಬೈಲ್ ಫೋನ್ ಬಳಸಿದ್ದು, ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಶುಕ್ರವಾರ ಗುವಾಹಟಿಯಲ್ಲಿ ನಡೆದ ಪಂದ್ಯದ 11ನೇ ಓವರ್‌ನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಡಗೌಟ್‌ನಲ್ಲಿ ಕುಳಿತಿದ್ದ ಮ್ಯಾನೇಜರ್ ರೋಮಿ ಭಿಂದರ್ ಮೊಬೈಲ್ ಫೋನ್ ಬಳಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಶೇಷವೆಂದರೆ, ಅವರ ಪಕ್ಕದಲ್ಲೇ ಕುಳಿತಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ಫೋನ್ ಸ್ಕ್ರೀನ್ ಕಡೆಗೆ ಗಮನ ಹರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಐಪಿಎಲ್‌ನ ‘ಆಂಟಿ-ಕರಪ್ಷನ್’ (ಭ್ರಷ್ಟಾಚಾರ ವಿರೋಧಿ) ಮತ್ತು PMOA (ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ವಲಯ)
ಪಂದ್ಯ ನಡೆಯುವ ಸಮಯದಲ್ಲಿ ಡಗೌಟ್‌ನಲ್ಲಿ ಮೊಬೈಲ್ ಫೋನ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಂತಿಲ್ಲ.
ತಂಡದ ಮ್ಯಾನೇಜರ್‌ಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಫೋನ್ ಬಳಸಲು ಅವಕಾಶವಿದೆಯಾದರೂ, ಮೈದಾನದ ಪಕ್ಕದ ಡಗೌಟ್‌ನಲ್ಲಿ ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸುವುದು ಗಂಭೀರ ತಪ್ಪು. ಅಲ್ಲಿ ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಏನು ಮಾಡುತ್ತಿದ್ದರು? ಬಿಸಿಸಿಐ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಅವರು ಎಕ್ಸ್ (X) ಖಾತೆಯಲ್ಲಿ ಆಗ್ರಹಿಸಿದ್ದಾರೆ.








