ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ವಿಪತ್ತು ತಪ್ಪಿಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಎಲ್ಲಾ ಜಲಾಶಯಗಳಲ್ಲಿನ ಒಳಹರಿವು ಮತ್ತು ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ನಿರ್ದೇಶನ ನೀಡಿದರು.
ಎಲ್ಲಾ ಜಿಲ್ಲೆಗಳಲ್ಲಿ 24×7 ನಿಯಂತ್ರಣ ಕೊಠಡಿ ಸ್ಥಾಪಿಸಲು ನಿರ್ದೇಶನ ನೀಡಲಾಗಿದೆ. ಎಲ್ಲಾ ಹಿರಿಯ ಅಧಿಕಾರಿಗಳಿಗೆ ತಮ್ಮ ಪ್ರಧಾನ ಕಚೇರಿಯನ್ನು ತೊರೆಯದಂತೆ ತಿಳಿಸಲಾಗಿದೆ ಎಂದು ಸಿಎಂ ಕಚೇರಿಯ ಹೇಳಿಕೆ ತಿಳಿಸಿದೆ.
ವಯನಾಡ್ ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಕೇರಳಕ್ಕೆ ಭಾರಿ ಮಣ್ಣು ಸಾಗಿಸುವ ಯಂತ್ರಗಳನ್ನು ಪೂರೈಸಲು ಸೂಚನೆಗಳನ್ನು ನೀಡಲಾಯಿತು.
ಮುಂಜಾಗ್ರತಾ ಕ್ರಮವಾಗಿ ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 766ರ ಮೂಲಕ ಬೆಂಗಳೂರು-ವಯನಾಡ್ ಮಾರ್ಗವನ್ನು ಬಂದ್ ಮಾಡಲಾಗಿದೆ. ಆದರೆ, ವಾಹನ ಮಾಲೀಕರಿಗೆ ಪರ್ಯಾಯ ರಸ್ತೆ ಗುಂಡ್ಲುಪೇಟೆ-ಬಂಡೀಪುರ-ಗುಡಲೂರು ಬಳಸಲು ಅವಕಾಶ ನೀಡಲಾಗಿತ್ತು.
ವಯನಾಡ್ ನಿಂದ ಗಾಯಗೊಂಡವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ಮತ್ತು ಎಚ್.ಡಿ.ಕೋಟೆಯಲ್ಲಿ ಚಿಕಿತ್ಸೆ ನೀಡಲು ಮೈಸೂರು ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಇದಲ್ಲದೆ, ವಯನಾಡ್ ನಿಂದ ಮೈಸೂರಿಗೆ ರೋಗಿಗಳನ್ನು ಕರೆತರಲು ಬಸ್ ಮತ್ತು ಇತರ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.